ಸ್ಕೂಲ್ ಬಸ್ ಗೆ ಮಿನಿ ಬಸ್ ಡಿಕ್ಕಿ - ಶಾಲಾಮಕ್ಕಳಿಗೆ ಗಾಯ ಕೋಲ್ನಾಡು ಬಳಿ ಭೀಕರ ಅಪಘಾತ
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಕಿರು ಸೇತುವೆ ಬಳಿ ಶಾಲಾ ಬಸ್ಸಿಗೆ ಟೂರಿಸ್ಟ್ ಮಿನಿ ಬಸ್ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು ಕಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಮಲ್ಪೆ ಕಡೆಯಿಂದ ಬೆಂಗಳೂರು ವಿಜಿಪುರಕ್ಕೆ ಹೋಗುತ್ತಿದ್ದ ಟೂರಿಸ್ಟ್ ಮಿನಿ ಬಸ್ ಕೊಲ್ನಾಡು ಕಿರು ಸೇತುವೆ ಬಳಿ ಮಕ್ಕಳನ್ನು ಇಳಿಸಿ ಹೋಗುತ್ತಿದ್ದ ಶಾಲಾ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ
ಅಪಘಾತದ ರಭಸಕ್ಕೆ ಶಾಲಾ ಬಸ್ ಹೆದ್ದಾರಿ ಬದಿಯ 10 ಅಡಿ ಆಳದ ಹೊಂಡಕ್ಕೆ ಬಿದ್ದಿದ್ದು ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಗಾಯಾಳು ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ
ಅಪಘಾತದಿಂದ ಟೂರಿಸ್ಟ್ ಮಿನಿ ಬಸ್ನಲ್ಲಿದ್ದ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಕೂಡಲೇ ಸಾಮಾಜಿಕ ಕಾರ್ಯಕರ್ತ ಪೇಚು ಯಾನೆ ಪ್ರಸಾದ್ ಪೂಜಾರಿ,ಮುಲ್ಕಿ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಹೆದ್ದಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಹೊಂಡಕ್ಕೆ ಬಿದ್ದ ಶಾಲಾ ಬಸ್ಸನ್ನು ಕ್ರೇನ್ ಮೂಲಕ ತೆರವು ಮಾಡಲಾಗಿದೆ
ಕೋಲ್ನಾಡ್ ಕಿರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಕಳೆದ ಕೆಲವು ತಿಂಗಳಿನಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ.
ಈ ಭಾಗದಲ್ಲಿ ಶಾಲಾ ಬಸ್ಸಿನವರು ಮಕ್ಕಳನ್ನು ಇಳಿಸುವ ವೇಳೆ ಹೆದ್ದಾರಿಯಲ್ಲಿ ಹಿಂದಿನಿಂದ ಬರುತ್ತಿರುವ ವಾಹನಗಳಿಗೆ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳಿಯರು ಹೇಳಿದ್ದಾರೆ
ಅಪಘಾತ ನಡೆದ ಸ್ಥಳದಲ್ಲಿ ಭಾರೀ ಗಾತ್ರದ ಮಾವಿನ ಮರ ಬಿದ್ದು ಶಾಲಾ ಬಸ್ ಮರಕ್ಕೆ ಡಿಕ್ಕಿಯಾಗಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ