Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕ್ಲೀನ್ ಆಯ್ತು ಮಂಗಳೂರಿನ ಅತೀ ಕೊಳಕು ಕೂಳೂರು ಬಸ್ ನಿಲ್ದಾಣ!! “ಮೀಡಿಯಾ ಮನಸುಗಳು” ತಂಡದಿಂದ 11ನೇ ಸ್ವಚ್ಛತಾ ಕಾರ್ಯ



ಮಂಗಳೂರು: ಅದು ನಗರದ ಹೊರವಲಯದ ಕೂಳೂರಿನ ಪ್ರಧಾನ ಬಸ್ ನಿಲ್ದಾಣ. ಅತೀ ಕೊಳಕು ತಾಣ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ನಿಲ್ದಾಣವನ್ನು ಬಳಸಲು ಬಸ್ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದರು. ಮಹಾನಗರ ಪಾಲಿಕೆ, ಸ್ಥಳೀಯ ಕಾರ್ಪೋರೇಟರ್, ಜನಪ್ರತಿನಿಧಿಗಳು, ಸ್ಥಳೀಯ ಸಾಮಾಜಿಕ ಸಂಘಟನೆಗಳು ಸೇರಿದಂತೆ ಎಲ್ಲರೂ ನಿರ್ಲಕ್ಷ್ಯ ಮಾಡಿದ್ದರು. ಆದರೆ ಇದನ್ನೇ ಸವಾಲಾಗಿ ತೆಗೆದುಕೊಂಡ “ಮೀಡಿಯಾ ಮನಸುಗಳು” ತಂಡದ ಸದಸ್ಯರು ತಮ್ಮ 11ನೇ ಕಾರ್ಯಕ್ರಮದ ಅಂಗವಾಗಿ ಕೆಲವೇ ಗಂಟೆಗಳಲ್ಲಿ ಕಸ ಗುಡಿಸಿ, ತ್ಯಾಜ್ಯ ತೆಗೆದು ವಿಲೇವಾರಿ ಮಾಡಿ, ಧೂಳು ತೊಳೆದು ಪ್ರಯಾಣಿಕರು ನಿಸ್ಸಂಕೋಚವಾಗಿ ಬಳಸುವಂತೆ ಮಾಡಿದರು. 


ಮನಪಾ ಸದಸ್ಯರು ನಾಟ್ ರಿಪ್ಲೈ!

ಸ್ವಚ್ಛತೆಯ ಈ ಮಹತ್ಕಾರ್ಯದ ವೇಳೆ ಆಡಳಿತ ಯಂತ್ರದ ಜಡತ್ವ ಮತ್ತೊಮ್ಮೆ ಬೆತ್ತಲಾಯಿತು. ನಿಲ್ದಾಣದ ಸ್ವಚ್ಛತೆಗೆ ಕನಿಷ್ಠ ಮೂಲಸೌಕರ್ಯವಾಗಿ ನೀರನ್ನಾದರೂ ಒದಗಿಸುವಂತೆ ಸ್ಥಳೀಯ ನಿಕಟಪೂರ್ವ ಮನಪಾ ಸದಸ್ಯ ಅನಿಲ್ ಕುಮಾರ್ ಅವರಿಗೆ ಸಾಲು ಸಾಲು ಫೋನ್ ಕರೆಗಳನ್ನು ಮಾಡಿದರೂ ಆಚೆಯಿಂದ ಬಂದದ್ದು ಒಂದೇ ಉತ್ತರ “ನಾಟ್ ರಿಪ್ಲೈ” ಕನಿಷ್ಠ ಸೌಜನ್ಯಕ್ಕದರೂ ವಿಷಯ ಏನು ಎಂದು ವಿಚಾರಿಸಲು ಮುಂದಾಗದ ಕಾರಣ ಸದಸ್ಯರು ನೀರನ್ನು ದೂರದಿಂದ ಹೊತ್ತು ತರಬೇಕಾಯಿತು. 


ಗುರುವಾರ ಮುಂಜಾನೆ 7 ಗಂಟೆಗೆ ಸ್ಥಳಕ್ಕೆ ಧಾವಿಸಿದ ಯುವಪಡೆ ಅಲ್ಲಿದ್ದ ತ್ಯಾಜ್ಯವನ್ನು ಸಂಪೂರ್ಣ ಗುಡಿಸಿ ತೆಗೆದು ಪ್ಯಾಕ್ ಮಾಡಿ ನಗರ ಪಾಲಿಕೆ ತ್ಯಾಜ್ಯ ವಾಹನದ ಮೂಲಕ ಸ್ಥಳಾಂತರ ಮಾಡಿದರು. ಕುಳಿತುಕೊಳ್ಳುವ ಕಬ್ಬಿಣದ ಬೆಂಚ್, ಹಿಂಬದಿಯ ಡಿಸ್ ಪ್ಲೇ ಎಲ್ಲವನ್ನೂ ನೀರು ಬಳಸಿ ತೊಳೆದು ಕ್ಲೀನ್ ಮಾಡಿದರು. ಸಾವಿರಾರು ಜನರು ಪ್ರತಿನಿತ್ಯ ಈ ಬಸ್ ನಿಲ್ದಾಣವನ್ನು ಬಳಸುವ ಕಾರಣ ತ್ಯಾಜ್ಯದ ರಾಶಿಯೂ ದೊಡ್ಡದಿತ್ತು. ಎಲ್ಲವನ್ನೂ ತೆಗೆದ ಬಳಿಕ ಮನಪಾ ಕಾರ್ಮಿಕರನ್ನು ಪ್ರತಿನಿತ್ಯ ನಿಲ್ದಾಣದ ಕಸ, ತ್ಯಾಜ್ಯ ಗುಡಿಸಿ ತೆಗೆಯುವಂತೆ ಮನವೊಲಿಸಲಾಯಿತು.


ಈ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್ ಹಾಗೂ ಶಿವು ಕುಲಾಲ್ ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಯುವ ಮನಸ್ಸುಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.