Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗಣೇಶ ಚತುರ್ಥಿಗೆ ಉಭಯ ಜಿಲ್ಲೆಗಳಿಗೆ ಬಳಕುಂಜೆಯಿಂದ 4 ಲಕ್ಷ ಕಬ್ಬು

 ವಿಶೇಷ ವರದಿ:ಕಿನ್ನಿಗೋಳಿ ಸಮೀಪದ ಬಳ್ಕುಂಜೆ-ಕರ್ನಿರೆ  ಉಳೆಪಾಡಿ ಪ್ರದೇಶದಲ್ಲಿ ೪೦ಕ್ಕೂ  ಹೆಚ್ಚು ರೈತರು ೫೦ ಎಕರೆಯಷ್ಟು ಗದ್ದೆಗಳಲ್ಲಿ ಕಬ್ಬು ಬೆಳೆದಿದ್ದಾರೆ. ಗಣೇಶ ಚತುರ್ಥಿಗೆ ಉಭಯಜಿಲ್ಲೆಗಳಿಗೆ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರುಗಳಿಗೂ ಮೂಲ್ಕಿ ತಾಲೂಕಿನ ಬಳ್ಕುಂಜೆಯಿಂದ ೪ ಲಕ್ಷಕ್ಕೂ ಹೆಚ್ಚು ಕಬ್ಬು ಪೂರೈಕೆಯಾಗಲು ಕಟಾವು ಕಾರ‍್ಯ ನಡೆಯುತ್ತಿದೆ.
ಗಣೇಶ ಚತುರ್ಥಿ ಸಂದರ್ಭ ಉಭಯಜಿಲ್ಲೆಗಳ ಮಾರುಕಟ್ಟೆಗೆ ಅತಿ ಹೆಚ್ಚು ಕಬ್ಬು ಪೂರೈಕೆಯಾಗುವುದು ಬಳಕುಂಜೆಯಿಂದ. ಈ ಸಲ ಸಪ್ಟಂಬರ್ ೧೪ಕ್ಕೆ ಚೌತಿಯಾದರೆ, ಸೆ. ೮ನೇ ತಾರೀಕಿಗೆ ಕ್ರೈಸ್ತರ ತೆನೆ ಹಬ್ಬಕ್ಕೆ ಸಾಕಷ್ಟು ಕಬ್ಬು ಪೂರೈಕೆ ಆಗಿದೆ. ಹಾಗಾಗಿ ಚಿಕ್ಕಮಗಳೂರು, ಶಿವಮೊಗ್ಗ ನಿಡ್ಡೋಡಿ, ಕಿನ್ನಿಗೋಳಿ ಚರ್ಚ್‌ಗಳಿಗೂ ಕಬ್ಬು ಎಂದಿನಂತೆ ನೀಡಿದ್ದೇವೆ. ಸುಮಾರು ೪೦ ವರ್ಷದಿಂದ ನಾವು ಕಬ್ಬು ಬೆಳೆ ಬೆಳೆಯುತ್ತಿದ್ದೇವೆ.  ಬಳಕುಂಜೆಯ ಮಣ್ಣು ಕಬ್ಬು ಬೆಳೆಗೆ ಉತ್ತಮವಾಗಿದೆ. ಇಲ್ಲಿನ ಸುಮಾರು ೪೦ಕ್ಕಿಂತಲೂ ಹೆಚ್ಚು ರೈತರು ಸುಮಾರು ೫೦ ಎಕರೆ ಪ್ರದೇಶದಲ್ಲಿ ಪ್ರತೀ ವರ್ಷ ಕಬ್ಬು ಬೆಳೆಯುತ್ತಾರೆ. ರಾಸಾಯನಿಕ ಗೊಬ್ಬರ ಹಾಕದೆ, ಸುಡುಮಣ್ಣು, ಹಟ್ಟಿಗೊಬ್ಬರ ಬಳಸುವುದರಿಂದ ಮತ್ತು ಇಲ್ಲಿನ ಕಬ್ಬು ರುಚಿಯಾಗಿರುವುದರಿಂದ ಇಲ್ಲಿನ ಕಬ್ಬುಗೆ ಪ್ರಸಿದ್ಧಿ ಮತ್ತು ಬೇಡಿಕೆ ಚೆನ್ನಾಗಿರುತ್ತದೆ. ಈ ಬಾರಿ ದಾಸ ಕಬ್ಬಿಗೆ ರೂ. ೩೫, ಕಪ್ಪು ಕಬ್ಬಿಗೆ ೩೫ ರೂಪಾಯಿಯಂತೆ ನಮ್ಮ ತೋಟದಿಂದ ಮಾರಾಟಗಾರರು ಕಬ್ಬು ಖರೀದಿಸಿದ್ದಾರೆ ಎನ್ನುತ್ತಾರೆ ಬೆಳೆಗಾರ ಸಂತಾನ್ ಡಿಸೋಜ ತಿಳಿಸಿದರು.

ಸಪ್ಟಂಬರ್ ೮ರ ಕ್ರೈಸ್ತರ ತೆನೆ ಹಬ್ಬಕ್ಕೆ ಮತ್ತು ಚೌತಿ ಹಬ್ಬಕ್ಕೆ ಇಲ್ಲಿನ ಕಬ್ಬನ್ನು ಪೂರೈಸಲಾಗುತ್ತದೆ. ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬೀಜ ಹಾಕಿ ಕಬ್ಬು ಬೆಳೆಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅಗಸ್ಟ್ ಸೆಪ್ಟೆಂಬರ್‌ನಲ್ಲಿ ಚೌತಿ ಹಬ್ಬದ ಸಂದರ್ಭ ಕಟಾವು ಮಾಡುತ್ತಾರೆ. ಕಟಾವಿನ ತನಕ ಈ ಬೆಳೆಗಾಗಿ ಸಾಕಷ್ಟುಕಷ್ಟಪಡಬೇಕು. ಜೂನ್ ತಿಂಗಳಲ್ಲಿಯೇ ವ್ಯಾಪಾರಿಗಳು ಬಂದು ಮುಂಗಡ ಹಣ ಕೊಟ್ಟು ಹೋಗುತ್ತಾರೆ, ಕಬ್ಬು ಕಟಾವು ಮಾಡಿ ೧೨ ಕಬ್ಬುಗಳಿಗೊಂದರಂತೆ ಒಂದು ಕಟ್ಟನ್ನು ಮಾಡಿ ಕೊಡಲಾಗುತ್ತದೆ, ವ್ಯಾಪಾರಸ್ಥರು ಇದನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಕೆಲವರು ರೈತರು ಸ್ವತಃ ತಾವೇ ಮಾರಾಟ ಮಾಡುತ್ತಾರೆ ಎಂದು ಎಲಿಯಾಸ್ ಡಿಸೋಜ ಮಾಹಿತಿ ನೀಡಿದರು.
ಕಬ್ಬಿನ ಬೆಳೆಯ ಜೊತೆಗೆ ತರಕಾರಿ ಬೆಳೆ ಲಾಭದಾಯಕ. ಪ್ರಾರಂಭದಲ್ಲಿ ಕಬ್ಬು ಬೆಳೆಯ ಜೊತೆ ಸೌತೆ ಇತ್ಯಾದಿ ತರಕಾರಿ ಬೆಳೆಯುತ್ತೇವೆ. ನಾವು ಸಾವಯವ ರೀತಿಯಲ್ಲಿ ಬೆಳೆಯುತ್ತಿದ್ದು, ತರಕಾರಿಯಿಂದ ಸುಮಾರು ೫೦ ಸಾವಿರ  ಆದಾಯ ಬಂದಿದೆ.  ಕಬ್ಬಿನಿಂದಲೂ ಉತ್ತಮ ಆದಾಯ ಇದ್ದು, ಸುಮಾರು ೪೦ ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ ಎನ್ನುವುದು ಈ ಭಾಗದ ಕಬ್ಬು ಬೆಳೆಗಾರರ ಮಾಹಿತಿ.
ಇಲ್ಲಿ  ಕೂಲಿ  ಕೆಲಸಗಾರರ ಸಮಸ್ಯೆ ಇದ್ದು, ಒರಿಸ್ಸಾದಿಂದ ಬಂದಿರುವ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿಂದ ಕಟಾವು ಕಾರ‍್ಯ ಮಾಡಿಸಿದ್ದೇವೆ. ಎರಡು ಎಕರೆಯಲ್ಲಿ ೨೨ ಸಾವಿರ ಕಬ್ಬು ಬೆಳೆಸಿದ್ದೇವೆ. ಕಳೆದ ವರ್ಷ ೧೫ ಸಾವಿರ ಕಬ್ಬು ಬೆಳೆಸಿದ್ದೆವು. ಈ ಬಾರಿ ಭತ್ತದ ಬೆಳೆಯ ಬದಲಿಗೆ ಕಬ್ಬನ್ನೇ ಹಾಕಿದ್ದೇವೆ ಎನ್ನುತ್ತಾರೆ  ರೋಹಿತ್  ಡಿಸೋಜ ಬಳ್ಕುಂಜೆ.
ಕಬ್ಬು ಉದ್ದ ಬೆಳೆಯಲ್ಲಿ ಬಳಿ ಬಣ್ಣದ ದಾಸ ಮತ್ತು ಕಪ್ಪು ಬಣ್ಣದ ಕೀಚಿ ಕಬ್ಬು ಒಂದು ಎಕರೆ ಕಬ್ಬು ಬೆಳೆಸಿದ್ದೇವೆ. ಸುಣ್ಣ, ಕೋಳಿಗೊಬ್ಬರ, ಹಟ್ಟಿಗೊಬ್ಬರ(ಹುಡಿ) ಶಿಲಾರಂಜಕ, ಸ್ವಲ್ಪ ಪ್ರಮಾಣದಲ್ಲಿ ಎನ್‌ಪಿಕೆ ಬಳಸುತ್ತೇವೆ. ಕಪ್ಪು ಕೀಚಿ ಸ್ವಲ್ಪ ದಾಸ ಕಬ್ಬು ಬೆಳೆಸುತ್ತೇವೆ. ೧೦ರಿಂದ ೧೩ಸಾವಿರ ಕಬ್ಬು ಇಳುವರಿ ಚೆನ್ನಾಗಿ ಬಂದಿದೆ. ಆದರೆ ಕೆಲಸಗಾರರ ಸಮಸ್ಯೆ ಜಾಸ್ತಿ ಇದೆ. ಒಂದು ಕಬ್ಬಿಗೆ ರೂ. ೩೫ ತನಕ ಹೋಗಿದೆ. ನಾವೇ ಸ್ವತಃ ಪಡುಬಿದ್ರೆಯಲ್ಲಿ ಮಾರಾಟ ಮಾಡುತ್ತೇವೆ ಎಂದು ಸ್ವತಃ ಕಬ್ಬು ಬೆಳೆದು ಪಡುಬಿದ್ರೆಯಲ್ಲಿ ಸ್ವತಃ ಮಾರಾಟ ಮಾಡುವ ವಿಶ್ವನಾಥ ಬಳ್ಕುಂಜೆ  

ಮೋಂತಿ(ತೆನೆ) ಹಬ್ಬಕ್ಕೆ ಮೂಡಿಗೆರೆ, ಮಂಗಳೂರು, ಉಜಿರೆ, ಕಾರ್ಕಳ, ಬಂಟ್ವಾಳ, ಉಡುಪಿ, ಕೊಕ್ಕಡ ಹೀಗೆ ಅನೇಕ ಚರ್ಚುಗಳಿಗೆ ಮೂವತ್ತರಿಂದ ನಲವತ್ತು ಸಾವಿರದಷ್ಟು ಕಬ್ಬು ಹೋಗುತ್ತದೆ. ಇಲ್ಲಿನ ಕಬ್ಬಿಗೆ ರುಚಿ ಜಾಸ್ತಿ. ಹಾಗೆ ಬೇಡಿಕೆ ಹೆಚ್ಚು. ಚೌತಿಗೆ ಕರಾವಳಿಯ ಮಂದಿ ಸಾಕಷ್ಟುಕಬ್ಬು ಕೊಂಡೊಯ್ಯುವುದರಿಂದ ಕಬ್ಬು ಮಾರಾಟಗಾರರಿಗೂ, ಬೆಳೆಸುವವರಿಗೂ ಉತ್ತಮ ಆದಾಯ ಎನ್ನುತ್ತಾರೆ ರಿಚರ್ಡ್