Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ -ಮೂವರು ವಶಕ್ಕೆ?


ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಶ್ರೀ ಕೋರ್ದಬ್ಬು  ದೈವಸ್ಥಾನದಲ್ಲಿ
  ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೊಲೀಸರು ಮೂವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದು ಕಳ್ಳತನದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ
ಆರೋಪಿಗಳನ್ನು ಕಾರ್ನಾಡ್,ಹೆಜಮಾಡಿ, ಹಾಗೂ ಪಡುಬಿದ್ರೆ ಸಮೀಪದ ಕಂಚಿನಡ್ಕ ಬಳಿಯ ನಿವಾಸಿಗಳು ಎಂದು ತಿಳಿದುಬಂದಿದೆ 
ಪ್ರಕರಣದ ವಿವರ
ಮಂಗಳವಾರ ಮಧ್ಯರಾತ್ರಿ
ಕಳ್ಳರು  ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಪ್ರಧಾನ ರಸ್ತೆಯಲ್ಲಿ ಬೈಕ್ ನಲ್ಲಿ  ಬಂದು ಕೂಗಳತೆಯ ದೂರದಲ್ಲಿ ನಿಲ್ಲಿಸಿ  ಬಳಿಕ ಕಳ್ಳರಲ್ಲಿ ಓರ್ವ ನಡೆದುಕೊಂಡು  ದೈವಸ್ಥಾನದ ಹಿಂಭಾಗದಲ್ಲಿರುವ ನೀರಿನ ಟ್ಯಾಂಕ್ ಬಳಿಯಿಂದ ಆವರಣ ಗೋಡೆಯ ಹತ್ತಿ ದೈವಸ್ಥಾನದ ಒಳಗಡೆ ಬಂದು ಗರ್ಭಗುಡಿಯ ಬಾಗಿಲಿನ ಬೀಗವನ್ನು ಭಾರವಾದ ಸಾಧನದಿಂದ ತುಂಡರಿಸಿ ಒಳಭಾಗದಲ್ಲಿದ್ದ ದೈವದ ಬೆಳ್ಳಿಯ ಮೊಗ, ಸೊಂಟದ ಪಟ್ಟಿ- 2 ,ದೈವದ  ಕಡ್ಸಲೆ ಸೇರಿ ಸುಮಾರು 35 ರಿಂದ 40ಲಕ್ಷ  ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳ್ಳತನ ಮಾಡಿ ಮತ್ತಿತರರ ಜೊತೆ ಬೈಕಿನಲ್ಲಿ ಪರಾರಿಯಾಗಿದ್ದಾನೆ
ಕೋರ್ದಬ್ಬು ದೈವಸ್ಥಾನದ ಬಳಿಯ ಸಿಸಿ ಕ್ಯಾಮರಾದಲ್ಲಿ  ಕಳ್ಳರು ದೈವಸ್ಥಾನಕ್ಕೆ ಬಂದು ಹೋಗುವ ದೃಶ್ಯದ ಆಧಾರದ ಮೇಲೆ
ಕಳ್ಳತನದ ಪ್ರಕರಣವನ್ನು ಭೇದಿಸಲು ಮುಲ್ಕಿ ಪೊಲೀಸರು ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದು   ಯಶಸ್ವಿಯಾಗಿದ್ದಾರೆ 
ಕಳ್ಳರನ್ನು ಮುಲ್ಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಮಾಹಿತಿ ತಿಳಿದ ಗ್ರಾಮಸ್ಥರು ಕಳ್ಳರನ್ನು ನೋಡಲು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಸೇರಿದ್ದಾರೆ. ಈ ನಡುವೆ ಮುಲ್ಕಿ ಪೊಲೀಸರು ಕಳ್ಳರನ್ನು ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಮಹಜರು ನಡೆಸಲು ಕರೆದುಕೊಂಡು ಬರುವ ಮಾಹಿತಿ ತಿಳಿದ ಗ್ರಾಮಸ್ಥರು ಕುತೂಹಲದಿಂದ  ದೈವಸ್ಥಾನದಲ್ಲಿ ಕೂಡಾ ಭಾರೀ ಸಂಖ್ಯೆಯಲ್ಲಿ ಸೇರಿದ್ದು ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. 
ಕಳ್ಳತನ ನಡೆಸಿದ ಆರೋಪಿಗಳ ಹೆಸರು ಹಾಗೂ ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ