ನಾಯಿಯ ಮೇಲೆ ಚಿರತೆ ದಾಳಿ,ಕಿನ್ನಿಗೋಳಿ ಪ.ಪಂ ವ್ಯಾಪ್ತಿಯ ಜಲ್ಲಿಗುಡ್ಡೆ ಸದರ್ನ್ ಎಸ್ಟೇಟ್ ಬಳಿ ಘಟನೆ
ಕಿನ್ನಿಗೋಳಿ :ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲ್ಲಿಗುಡ್ಡೆ ಸದರ್ನ್ ಎಸ್ಟೇಟ್ ಬಳಿ ಶುಕ್ರವಾರ ರಾತ್ರಿ ಚಿರತೆಯೊಂದು ನಾಯಿಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಶರತ್ ಎಂಬುವವರ ಮನೆಯ ಮುಂಭಾಗದಲ್ಲಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ. ಬಳಿಕ ನಾಯಿಯನ್ನು ಹೊತ್ತೊಯ್ದ ಚಿರತೆ ಸಮೀಪದ ಮರವನ್ನು ಏರಿ ಕುಳಿತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೊಬ್ಬೆ ಹಾಕಿ ಚಿರತೆಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರ ಕೂಗಾಟದಿಂದ ಬೆದರಿದ ಚಿರತೆ, ತನ್ನ ಬಾಯಲ್ಲಿದ್ದ ನಾಯಿಯನ್ನು ಮರದಿಂದ ಕೆಳಗೆ ಬಿಟ್ಟು ಅಲ್ಲಿಂದ ಪರಾರಿಯಾಗಿದೆ.
ಚಿರತೆಯ ದಾಳಿಗೆ ಒಳಗಾದ ನಾಯಿ ಮೃತಪಟ್ಟಿದೆ. ಜನವಸತಿ ಪ್ರದೇಶದ ಸಮೀಪವೇ ಚಿರತೆ ಕಾಣಿಸಿಕೊಂಡಿರುವುದರಿಂದ ಜಲ್ಲಿಗುಡ್ಡೆ ಹಾಗೂ ಸದರ್ನ್ ಎಸ್ಟೇಟ್ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸಿ, ಚಿರತೆಯ ಸೆರೆಗಾಗಿ ಬೋನು ಇಟ್ಟು ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.