ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಚಿವ ಶಿವರಾಜ್ ತಂಗಡಗಿ ಜೊತೆ ಶಾಸಕ ಮಂಜುನಾಥ ಭಂಡಾರಿ ಭಾಗಿ!
ಮಂಗಳೂರು: ಸೆ.4ರಿಂದ 6ರವರೆಗೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಬಿಜಿಎಸ್ ಸಂಸ್ಥೆಗಳ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಭಾಗವಹಿಸಿದರು.
ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಕನ್ನಡಿಗರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಡಿಜಿಟಲ್ ಮತ್ತು ತಂತ್ರಜ್ಞಾನ ಯುಗದಲ್ಲೂ ಉಳಿಸಿ ಬೆಳೆಸಲು ಎಲ್ಲ ಕನ್ನಡಿಗರೂ ಒಟ್ಟಾಗಿ ಶ್ರಮಿಸಬೇಕು ಎಂಬ ಸಂದೇಶವೂ ಕೇಳಿಬಂದಿದೆ.
ಈ ಬಾರಿ ‘ಅಕ್ಕ’ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ, ಸಿನಿಮಾ ಹಾಗೂ ವಿವಿಧ ಕನ್ನಡಪರ ಚಟುವಟಿಕೆಗಳು ಸಮ್ಮೇಳನದ ವಿಶೇಷ ಆಕರ್ಷಣೆಯಾಗಿವೆ.