ತುಳುವರ ದಶಕಗಳ ಕನಸು ನನಸು: ಸರ್ಕಾರದ ನಿರ್ಧಾರಕ್ಕೆ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸ್ವಾಗತ
ಮಂಗಳೂರು: ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರವನ್ನು ಅಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸ್ವಾಗತಿಸಿದ್ದಾರೆ.
“ಇದು ಕೇವಲ ಒಂದು ಭಾಷೆಗೆ ಸಿಕ್ಕ ಮಾನ್ಯತೆಯಲ್ಲ; ತುಳುನಾಡಿನ ಅಸ್ಮಿತೆ, ಸಂಸ್ಕೃತಿ ಮತ್ತು ಸಾವಿರಾರು ವರ್ಷಗಳ ಪರಂಪರೆಗೆ ದೊರೆತ ಗೌರವ” ಎಂದು ಅವರು ಬಣ್ಣಿಸಿದ್ದಾರೆ.
ತುಳು ಭಾಷಿಕರ ಹಲವು ದಶಕಗಳ ಹೋರಾಟ, ನಿರಂತರ ಹಕ್ಕೊತ್ತಾಯ ಹಾಗೂ ಜನಾಭಿಪ್ರಾಯಕ್ಕೆ ಸರ್ಕಾರ ಸ್ಪಂದಿಸಿರುವುದು ಸಂತಸದ ಸಂಗತಿ. ಈ ಐತಿಹಾಸಿಕ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಂಪುಟದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ತುಳು ಕೇವಲ ಸಂವಹನದ ಭಾಷೆಯಲ್ಲ. ಕರಾವಳಿಯ ಜನಜೀವನ, ಸಂಸ್ಕೃತಿ, ಆಚರಣೆ, ಕಲೆ, ಸಾಹಿತ್ಯ ಮತ್ತು ಪರಂಪರೆಯ ಜೀವನಾಡಿಯಾಗಿದೆ. ಅಧಿಕೃತ ಭಾಷೆಯ ಸ್ಥಾನಮಾನದಿಂದ ತುಳುವಿನ ಆಡಳಿತಾತ್ಮಕ ಬಳಕೆ, ಶಿಕ್ಷಣ, ಸಾಹಿತ್ಯ, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಬೇಕು.
ಮುಂದಿನ ಗುರಿ ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದದ ಮಾನ್ಯತೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡು ತುಳುವರ ಬಹುದಿನಗಳ ಮತ್ತೊಂದು ಕನಸನ್ನು ನನಸು ಮಾಡಬೇಕು ಎಂದು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶಿಸಿದ್ದಾರೆ.