Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಿ.ಟಿ. ರವಿ ಅವರ ಅವಹೇಳನಕಾರಿ ಹೇಳಿಕೆಗೆ ತೀವ್ರ ಖಂಡನೆ, ಕ್ಷಮೆಯಾಚನೆಗೆ ಸಿರಾಜ್ ಬಜ್ಪೆ ಆಗ್ರಹ

ಮಂಗಳೂರು: ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ‘ಸೂಳೆ'ಎಂಬ ಅವಹೇಳನಕಾರಿ ಪದ ಬಳಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ ಅವರು ಕೇವಲ ಒಬ್ಬ ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಲ್ಲ. ಅವರು ಈ ರಾಜ್ಯದ ಜವಾಬ್ದಾರಿಯುತ ಸಾರ್ವಜನಿಕ ಪ್ರತಿನಿಧಿಯಾಗಿದ್ದು, ಸಚಿವರಾಗಿಯೂ ಕಾರ್ಯನಿರ್ವಹಿಸಿದವರು. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಂತಹ ಕೀಳುಮಟ್ಟದ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿರುವುದು ಅತ್ಯಂತ ಖಂಡನೀಯ.

ಒಬ್ಬ ಜನಪ್ರತಿನಿಧಿಯ ಬಾಯಿಂದ ಇಂತಹ ಪದಗಳು ಹೊರಬರುವುದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅವಮಾನವಲ್ಲ; ಇದು ಪ್ರಜಾಪ್ರಭುತ್ವದ ವ್ಯವಸ್ಥೆ, ಜನಪ್ರತಿನಿಧಿಗಳ ಘನತೆ ಹಾಗೂ ವಿಧಾನಮಂಡಲದ ಗೌರವಕ್ಕೂ ಧಕ್ಕೆ ತರುವಂತಹದ್ದು. ಇಂತಹ ಹೇಳಿಕೆಗಳು ಬಿಜೆಪಿ ಪಕ್ಷಕ್ಕೂ ಅದರ ನಾಯಕತ್ವಕ್ಕೂ ಶೋಭೆ ತರುವುದಿಲ್ಲ.

ಈ ಕೂಡಲೇ ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಿ.ಟಿ. ರವಿ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಇಂತಹ ಹೊಲಸು ಭಾಷೆಯನ್ನು ಬಳಸುವವರಿಗೆ ಕಡಿವಾಣ ಹಾಕುವ ಅಗತ್ಯವಿದೆ.ಪ್ರಚೋದನಕಾರಿ ಮಾತಿನ ಮೇಲೆ ರಾಜ್ಯ ಸರಕಾರ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು .

ಭಾರತದ ಸಂವಿಧಾನದ ಅಡಿಯಲ್ಲಿ ಸಮಾನ ಹಕ್ಕುಗಳೊಂದಿಗೆ ಬದುಕುತ್ತಿರುವ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಸಿ.ಟಿ. ರವಿ ಅವರು ಮುಸ್ಲಿಂ ಸಮುದಾಯದ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಿರಾಜ್ ಬಜ್ಪೆ ಆಗ್ರಹಿಸಿದ್ದಾರೆ.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ. ಯಾವುದೇ ಸಮುದಾಯವನ್ನು ಅವಹೇಳನಿಸುವ ಹೇಳಿಕೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇಂತಹ ಹೇಳಿಕೆಗಳನ್ನು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟವು ಅತ್ಯಂತ ಕಟುವಾಗಿ ಖಂಡಿಸುತ್ತದೆ ಎಂದು ಸಿರಾಜ್ ಬಜ್ಪೆ ತಿಳಿಸಿದ್ದಾರೆ.