ಕರಂಬಾರು ಕಿರುಸೇತುವೆ ಕುಸಿತ: ತಕ್ಷಣ ಸ್ಪಂದಿಸಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ – ಎರಡು ದಿನಗಳಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆಗೆ ಅಧಿಕಾರಿಗಳ ಭರವಸೆ
ಬಜಪೆ:ಮಂಗಳೂರು–ಬಜ್ಪೆ–ಕಟೀಲು ರಾಜ್ಯ ಹೆದ್ದಾರಿಯ ಕರಂ ಬಾರು ಪೆಟ್ರೋಲ್ ಪಂಪ್ ನ ಸಮೀಪದಲ್ಲಿರುವ ಕಿರುಸೇತುವೆ ಕುಸಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳನ್ನು ಸಂಪರ್ಕಿಸಿ, ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಮಾತುಕತೆ ನಡೆಸಿದರು.ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸೇತುವೆಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಎರಡು ದಿನಗಳೊಳಗೆ ಪರ್ಯಾಯ ರಸ್ತೆಯ ವ್ಯವಸ್ಥೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡ ಸಂಬಂಧಪಟ್ಟ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು, ಬಜ್ಪೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಬಜ್ಪೆ ಪಟ್ಟಣ ಪಂಚಾಯಿತಿಯ ಎಲ್ಲಾ ಕೌನ್ಸಿಲರ್‌ಗಳಿಗೆ ಬಜ್ಪೆ ನಾಗರಿಕರಕ್ಷಣಾ ವೇದಿಕೆಯು ಅಭಿನಂದನೆಯನ್ನು ಸಲ್ಲಿಸಿದರು.
ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೇತುವೆಯ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದರ ಜೊತೆಗೆ, ಕಾಮಗಾರಿ ಅವಧಿಯಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳಾದ ಎಂಜಿನಿಯರ್ ಇಸ್ಮಾಯಿಲ್ ,ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ ,ಮಕ್ಬೂಲ್ ,ಶೇಕ್ ಅಬ್ದುಲ್ಲಾ ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಜೀರ್ ,ನವೀದ್ ರಹಮಾನ್ ,ರಮೇಶ ,ಶಾಂತ ಜಲಾಲ್ ಮರವೂರು ,ಕಿರಣ್ ,ಶ್ರೀಧರ್ ಫೈಝಲ್ ,ಮುಸ್ತಾಫಾ ,ಕಲಾಂ ,ವಸಂತ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.