ಬಜಪೆ: ಕಿರು ಸೇತುವೆಯ ಒಂದು ಭಾಗ ಬಿರುಕು – ವಾಹನ ಸಂಚಾರ ಬಂದ್ ,ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ
ಬಜಪೆ: ಕೆಂಜಾರು–ಬಜಪೆ–ಕಟೀಲು ರಾಜ್ಯ ಹೆದ್ದಾರಿಯ ಕರಂಬಾರ್ ನ ಐಒಸಿಎಲ್ (IOCL) ಪೆಟ್ರೋಲ್ ಪಂಪ್ ಸಮೀಪದ ಕಿರು ಸೇತುವೆಯ ಒಂದು ಭಾಗ ಬುಧವಾರ ಬಿರುಕು ಬಿಟ್ಟಿರುವ ಘಟನೆ ನಡೆದಿದ್ದು,ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಿದ್ದಾರೆ.ಕಿರುಸೇತುವೆ ಬಿರುಕು ಬಿಟ್ಟಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಿದ್ದಾರೆ.ಈ ಬಗ್ಗೆ ಪೊಲೀಸರು ಲೋಕೋಪಯೋಗಿ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಹೆದ್ದಾರಿಯಲ್ಲಿ ಈಗಾಗಲೇ ವಾಹನಗಳ ಸಂಚಾರವನ್ನು ಸ್ತಗಿತಗೊಳಿಸಲಾಗಿದೆ.ಈ ವೇಳೆ ಬಜಪೆ ಸಮೀಪದ ಪೊರ್ಕೊಡಿ ಮೂಲಕ ಹಾದುಹೋಗುವ ರಸ್ತೆಯಲ್ಲಿ ಕೆಲ ವಾಹನಗಳು ಸಂಚರಿಸಿದವು.
ಕರಂಬಾರು ಪೆಟ್ರೋಲ್ ಪಂಪ್ ನ ಸಮೀಪದ ಕಿರು ಸೇತುವೆ ಬಿರುಕು ಬಿಟ್ಟ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದ್ದು,ಸಾರ್ವಜನಿಕರು ವಾಹನಗಳ ಸಂಚಾರಕ್ಕೆ ಈ ಕೆಳಗಿನ ಪರ್ಯಾಯ ಮಾರ್ಗವನ್ನು ಬಳಸುವಂತೆ ಬಜಪೆ ಪೊಲೀಸರು ಸೂಚನೆಯನ್ನು ನೀಡಿದ್ದಾರೆ.
ಮಂಗಳೂರು, ವಿಮಾನ ನಿಲ್ದಾಣ ಕಡೆಗೆ ಸಂಚರಿಸುವರು ಜರಿನಗರ ಅಥವಾ ಪೊರ್ಕೋಡಿ ರಸ್ತೆಯಾಗಿ ಸಂಚರಿಸಬೇಕು.ಕಟೀಲು, ಬಜಪೆ, ಕೈಕಂಬ ಕಡೆಗೆ ಸಂಚರಿಸುವರು ಜರಿನಗರ ಅಥವಾ ಪೊರ್ಕೋಡಿ ರಸ್ತೆಯಾಗಿ ಸಂಚರಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಕಿರು ಸೇತುವೆಯ ಬಿರುಕು ಬಿಟ್ಟ ಸಮೀಪ ಹೆದ್ದಾರಿಯನ್ನು ಅಗೆಯಲಾಗಿದ್ದು,ತಾತ್ಕಲೀಕ ರಸ್ತೆಯ ನಿರ್ಮಾಣದ ಕಾರ್ಯ ನಡಯುತ್ತಿದೆ.
ಸ್ಥಳದಲ್ಲಿ ಬಜಪೆ ಪೊಲೀಸರು,ಲೋಕೋಪಯೋಗಿ ಇಲಾಖೆಯವರು,ಬಜಪೆ ಪ.ಪಂ ನ ಅಧಿಕಾರಿಗಳು ಇದ್ದರು.