ಬೈಕ್ - ಲಾರಿ ಡಿಕ್ಕಿ,ಬೈಕ್ ಸವಾರ ಸಾವು ,ಮೂಚ್ಚೂರಿನಲ್ಲಿ ಘಟನೆ
ಬಜಪೆ:ಬೈಕ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೂಚ್ಚೂರಿನ ಅಂಚೆ ಕಚೇರಿ ಬಳಿ ಸಂಭವಿಸಿದೆ. ಘಟನೆಯಲ್ಲಿ ಅಶೋಕ್ ಫರ್ನಾಂಡಿಸ್ (45) ಮೃತಪಟ್ಟವರು.
ಮೃತ ಅಶೋಕ್ ಫರ್ನಾಂಡಿಸ್ ಅವರು ಬೈಕ್‌ನಲ್ಲಿ ಮುಚ್ಚೂರು ಅಂಚೆಕಚೇರಿ ಬಳಿ ತಲುಪುತ್ತಿದ್ದಂತೆ, ಕೊಂಪದವು ಕಡೆಯಿಂದ ಮೂಚ್ಚೂರು ಕಡೆಗೆ ಲಾರಿಯನ್ನು ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಅಶೋಕ್ ಫರ್ನಾಂಡಿಸ್ ಅವರ ತಲೆ, ಭುಜ, ಮುಖ, ತೊಡೆ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಡಿಕ್ಕಿ ಹೊಡೆದ ಲಾರಿಯ ಚಾಲಕ ಸೋಮಪ್ಪ ಮಾದರ್ ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.