Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಎಲ್-ನಿನೋ ಆತಂಕ: ಅಂತರ್ಜಲ ಸಂರಕ್ಷಣೆಗೆ ಬಡಗ ಎಕ್ಕಾರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಅಭಿಯಾನ

ಬಜಪೆ:ಮಂಗಳೂರು ಉತ್ತರ: ಎಲ್‌-ನೀನೋ (El Niño) ಪ್ರಭಾವದಿಂದಾಗಿ ಭೂಮಿಯ ತಾಪಮಾನ ಹೆಚ್ಚಾಗಿ ಕರ್ನಾಟಕದಲ್ಲಿ ಶೇಕಡ 30 ಪ್ರತಿಶತ ಮಳೆಯ  ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಳೆನೀರನ್ನು ವ್ಯರ್ಥವಾಗದೆ ಭೂಮಿಯಲ್ಲಿ ಇಂಗಿಸುವ ಮಳೆನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, ಮಂಗಳೂರು ಉತ್ತರ ವತಿಯಿಂದ “ಮನೆಗೊಂದು ಇಂಗು ಗುಂಡಿ – ಅಂತರ್ಜಲ ಹೆಚ್ಚಿಸುವ ನಮ್ಮ ಸಂಕಲ್ಪ” ಎಂಬ ವಿಶಿಷ್ಟ ಜಲ ಸಂರಕ್ಷಣಾ ಅಭಿಯಾನ ನಡೆಯಿತು.
(ವಿದ್ಯಾರ್ಥಿಗಳಿಂದ ಶಾಲೆಯ ಆವರಣದಲ್ಲಿ ಇಂಗು ಗುಂಡಿ ನಿರ್ಮಾಣ)

ಮಳೆನೀರನ್ನು ಸಾಧ್ಯವಾದಷ್ಟು ಭೂಮಿಯಲ್ಲಿಯೇ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಕೊರತೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಅಭಿಯಾನವನ್ನು ಶಾಲಾ ಮಟ್ಟದಿಂದ ಗ್ರಾಮ ಮಟ್ಟಕ್ಕೆ ವಿಸ್ತರಿಸಲಾಗಿದೆ. “ಮನೆಗೊಂದು ಇಂಗು ಗುಂಡಿ – ನಾಳೆಯ ನೀರಿನ ಭದ್ರತೆ” ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರನ್ನು ಈ ಜನಪರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ.

(ಒಂಬತ್ತನೇ ತರಗತಿ ವಿದ್ಯಾರ್ಥಿ ಶ್ರೀಯಾನ್ ಅಮೀನ್ ಇವರಿಂದ ಸಂಘಗಳಿಗೆ ಮಾಹಿತಿ)

ಪೋಷಕರಿಗೆ ವಿಶೇಷ ಜಾಗೃತಿ
ಕಾರ್ಯಕ್ರಮ:

ಅಭಿಯಾನದ ಅಂಗವಾಗಿ ಶಾಲೆಯಲ್ಲಿ ಸುಮಾರು 130 ಪೋಷಕರನ್ನು ಆಹ್ವಾನಿಸಿ ವಿಶೇಷ ಜಲ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವರ್ಷ ಎಸ್ ಪೂಜಾರಿ ಮತ್ತು ಖುಷಿ 10ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಪವರ್‌ಪಾಯಿಂಟ್ ಪ್ರಸ್ತುತಿಯ ಮೂಲಕ ಮಳೆನೀರಿನ ಸಂರಕ್ಷಣೆ, ಅಂತರ್ಜಲದ ಮಹತ್ವ, ಇಂಗು ಗುಂಡಿಯ ಅಗತ್ಯತೆ ಹಾಗೂ ಅದನ್ನು ಮನೆಯ ಆವರಣದಲ್ಲಿ ನಿರ್ಮಿಸುವ ವಿಧಾನಗಳ ಕುರಿತು ಪೋಷಕರ ಸಭೆಯಲ್ಲಿ ಪೋಷಕರಿಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಮಳೆನೀರು ನೇರವಾಗಿ ಚರಂಡಿ ಅಥವಾ ರಸ್ತೆಗೆ ಹರಿದುಹೋಗದೆ, ಅದನ್ನು ಭೂಮಿಯಲ್ಲಿ ಇಂಗಿಸುವ ಸರಳ ವಿಧಾನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಲಾಯಿತು. ಇಂಗು ಗುಂಡಿಯು ಮಳೆನೀರನ್ನು ಭೂಮಿಯೊಳಗೆ ಇಂಗಿಸಲು ನೆರವಾಗುವುದರ ಜೊತೆಗೆ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗುತ್ತದೆ ಎಂಬ ಅರಿವನ್ನು ಮೂಡಿಸಲಾಯಿತು.
(ಗೂಗಲ್ ಫಾರ್ಮನ್ನ ತುಂಬಿಸಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ರಮ್ಯಾ ಕೆ ಇವರಿಂದ ಮಾರ್ಗದರ್ಶನ)

ಶಾಲಾ ಸಂಪುಟದ ಮಹತ್ವದ ನಿರ್ಣಯ:
ಜಲ ಸಂರಕ್ಷಣೆಯ ಅಗತ್ಯತೆಯನ್ನು ಮನಗಂಡು ಶಾಲಾ ಸಂಪುಟ ಸಭೆಯಲ್ಲಿ ಶಾಲೆಯ ಇಕೋ ಕ್ಲಬ್ ನ ಸಹಯೋಗದೊಂದಿಗೆ ಇಂಗು ಗುಂಡಿ ನಿರ್ಮಾಣ ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು. ಇದರಂತೆ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮನೆಯ ಆವರಣದಲ್ಲಿ ಕನಿಷ್ಠ ಒಂದು ಇಂಗು ಗುಂಡಿಯನ್ನು ನಿರ್ಮಿಸುವಂತೆ ಶಾಲೆಯ ದೈನಂದಿನ ಅಸೆಂಬ್ಲಿಯಲ್ಲಿ ಪ್ರಮಾಣವಚನನ್ನು ವಿಧ್ಯಾರ್ಥಿಗಳು ಶಿಕ್ಷಕರು ತೆಗೆದುಕೊಂಡಿದ್ದರು.
ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತಲಿನ ಕುಟುಂಬಗಳು ಹಾಗೂ ನೆರೆಹೊರೆಯವರಿಗೂ ಇಂಗು ಗುಂಡಿಯ ಮಹತ್ವವನ್ನು ತಿಳಿಸಿ, ಸಾಧ್ಯವಾದಷ್ಟು ಹೆಚ್ಚಿನ ಮನೆಗಳಲ್ಲಿ ಇಂತಹ ವ್ಯವಸ್ಥೆ ನಿರ್ಮಾಣವಾಗುವಂತೆ ಜಲ ಸಂರಕ್ಷಣೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವಂತೆ ನಿರ್ಧರಿಸಲಾಯಿತು.
(ವರ್ಷ ಎಸ್ ಪೂಜಾರಿ ಇವರಿಂದ ಪೋಷಕರಿಗೆ ಜಲ ಸಂರಕ್ಷಣೆಯ ಬಗ್ಗೆ ಮಾಹಿತಿ)

ತಂತ್ರಜ್ಞಾನದ ಮೂಲಕ ಪ್ರಮಾಣಪತ್ರ ವಿತರಣೆ:

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಇಂಗು ಗುಂಡಿ ನಿರ್ಮಿಸಿದ ನಂತರ ಅದರ ಛಾಯಾಚಿತ್ರವನ್ನು ಅಪ್ಲೋಡ್ ಮಾಡಲು ವಿಶೇಷ Google Form ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ವಿಳಾಸ ಹಾಗೂ ಇಂಗು ಗುಂಡಿಯ ಛಾಯಾಚಿತ್ರವನ್ನು ಈ ಫಾರ್ಮ್‌ನಲ್ಲಿ ದಾಖಲಿಸಬಹುದಾಗಿದೆ.ಗೂಗಲ್ ಫಾರ್ಮನ್ನ ತುಂಬಿಸುವ ವಿಧಾನವನ್ನು ತಮ್ಮ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ವಿಧ್ಯಾರ್ಥಿಗಳ ಮೂಲಕ ತಿಳಿಸಲು ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ   ಪವರ್ ಪಾಯಿಂಟ್ ಬಳಸಿ  ಸಂಸ್ಥೆಯ ಗಣಿತ ಶಿಕ್ಷಕಿ ಶ್ರೀಮತಿ ರಮ್ಯಾ ಕೆ  ತರಬೇತಿ ನೀಡಿದ್ದರು.
ಕನಿಷ್ಠ ಸುಮಾರು 1 ಘನ ಮೀಟರ್ (1 m³) ಸಾಮರ್ಥ್ಯದ ಇಂಗು ಗುಂಡಿಯಿಂದ ಆರಂಭಿಸಿ, ಲಭ್ಯವಿರುವ ಸ್ಥಳ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇದಕ್ಕಿಂತ ದೊಡ್ಡ ಗಾತ್ರದ ಗುಂಡಿಯನ್ನೂ ನಿರ್ಮಿಸಲು ತಿಳಿಸಲಾಗಿತ್ತು.
ಈ ಅಭಿಯಾನದ ವಿಶೇಷತೆಯೆಂದರೆ, ವಿದ್ಯಾರ್ಥಿಯು ತನ್ನ ಚಟುವಟಿಕೆಯ ವಿವರಗಳನ್ನು ಫಾರ್ಮ್‌ನಲ್ಲಿ ಸಲ್ಲಿಸಿದ ನಂತರ ಸ್ವಯಂಚಾಲಿತವಾಗಿ ಪ್ರಮಾಣಪತ್ರವನ್ನು Certify'em add on ಬಳಸಿ ಸಿದ್ಧಪಡಿಸಿ, ವಿದ್ಯಾರ್ಥಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು.  ಇದರಿಂದ ಜಲ ಸಂರಕ್ಷಣೆಯಂತಹ ಸಾಮಾಜಿಕ ಹೊಣೆಗಾರಿಕೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ ತಂತ್ರಜ್ಞಾನವನ್ನು ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯೊಂದಿಗೆ ಪರಿಣಾಮಕಾರಿಯಾಗಿ ಸಂಯೋಜಿಸಲಾಗಿದೆ.


ಗ್ರಾಮದ ಸಂಘ-ಸಂಸ್ಥೆಗಳ ಸಹಕಾರ:

ಈ ಜಲ ಸಂರಕ್ಷಣಾ ಅಭಿಯಾನದ ಮಾಹಿತಿಯನ್ನು ಗ್ರಾಮದ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಿಸಲಾಗಿತ್ತು. ವಿಜಯ ಯುವ ಸಂಗಮ ಎಕ್ಕಾರು, ಶ್ರೀ ದುರ್ಗಾ ಕಲ್ಚರಲ್ ಅಂಡ್ ಕ್ರಿಕೆಟ್ ಕ್ಲಬ್, ನವಜ್ಯೋತಿ ಫ್ರೆಂಡ್ಸ್ ಕ್ಲಬ್,ಕಾಯ್ದಂಡ ಯುವಕ ಸಂಘ, ಬಿಲ್ಲವ ಸಮಾಜ ಸೇವಾ ಸಂಘ ಕಟೀಲು, ಬಂಟರ ಸಂಘಎಕ್ಕಾರು 
 ಈ ಜನಪರ ಕಾಳಜಿಗೆ ಸ್ಪಂದಿಸಿರುವ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ವಿಶೇಷವಾಗಿ ಪ್ರಶಂಸನೀಯವಾಗಿದೆ.

(ಗ್ರಾಮಸ್ಥರಿಂದ ನಿರ್ಮಿಸಿದ ಇಂಗು ಗುಂಡಿ)

ಅಭಿಯಾನದ ಕುರಿತು ವಿಶೇಷ ಕರಪತ್ರ ಹಾಗೂ ಮನವಿ ಯನ್ನು ಸಿದ್ಧಪಡಿಸಿ ಗ್ರಾಮದ ಜನರಿಗೆ ವಿತರಿಸುವ ಮೂಲಕ ಹಾಗೂ ಗ್ರಾಮದಲ್ಲಿರುವ ಹಾಗೂ ಅಕ್ಕಪಕ್ಕದ ಗ್ರಾಮದ ಗಳಲ್ಲಿರುವ ಸಂಘ ಸಂಸ್ಥೆಗಳಿಗೆ ಸ್ತ್ರೀಶಕ್ತಿ ಗುಂಪುಗಳಿಗೆ ವಿದ್ಯಾರ್ಥಿಗಳು ಮನವಿಯನ್ನು ನೀಡಿದ್ದು ಅವರು ಈ  ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ . ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾತ್ರವಲ್ಲದೆ, ಪೋಷಕರು, ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಗಳನ್ನು ಒಳಗೊಂಡ ಸಾಮೂಹಿಕ ಜಲ ಸಂರಕ್ಷಣಾ ಚಳವಳಿಯಾಗಿ ಈ ಕಾರ್ಯಕ್ರಮ ರೂಪುಗೊಳ್ಳುತ್ತಿದೆ.
(ವಿವಿಧ ಸಂಘದ ಪದಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಪ್ರತಿ)

ಭವಿಷ್ಯದ ನೀರಿನ ಭದ್ರತೆಗಾಗಿ ಇಂದಿನ ಸಂಕಲ್ಪ
ಮಳೆನೀರು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ವ್ಯರ್ಥವಾಗಿ ಹರಿದುಹೋಗಲು ಬಿಡದೆ ಭೂಮಿಯಲ್ಲಿ ಇಂಗಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಣ್ಣದಾದ ಒಂದು ಇಂಗು ಗುಂಡಿಯೂ ಭವಿಷ್ಯದ ಅಂತರ್ಜಲ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲದು ಎಂಬ ಸಂದೇಶವನ್ನು ಈ ಅಭಿಯಾನದ ಮೂಲಕ ಸಮಾಜಕ್ಕೆ ನೀಡಲಾಗುತ್ತಿದೆ.
“ಮನೆಯಿಗೊಂದು ಇಂಗು ಗುಂಡಿ – ಅಂತರ್ಜಲ ಹೆಚ್ಚಿಸುವ ನಮ್ಮ ಸಂಕಲ್ಪ” ಎಂಬ ಆಶಯದೊಂದಿಗೆ ಆರಂಭಗೊಂಡಿರುವ ಈ ಅಭಿಯಾನವು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಮತ್ತು ನೀರಿನ ಮಹತ್ವದ ಅರಿವು ಮೂಡಿಸುವುದರ ಜೊತೆಗೆ, ಶಾಲೆಯಿಂದ ಮನೆಗೆ, ಮನೆಯಿಂದ ಗ್ರಾಮಕ್ಕೆ ಮತ್ತು ಗ್ರಾಮದಿಂದ ಸಮಾಜಕ್ಕೆ ಜಲ ಸಂರಕ್ಷಣೆಯ ಸಂದೇಶವನ್ನು ತಲುಪಿಸುವ ಪ್ರಯತ್ನಕ್ಕೆ  ಸಂಸ್ಥೆಯ ಆಂಗ್ಲ ಭಾಷೆ ಶಿಕ್ಷಕ ಡಾ. ಅನಿತ್ ಕುಮಾರ್ ಅವರು  ಮಾರ್ಗದರ್ಶನವನ್ನು ನೀಡಿದ್ದರು.
“ಮಳೆನೀರು ಉಳಿಸೋಣ – ಅಂತರ್ಜಲ ಹೆಚ್ಚಿಸೋಣ – ಭವಿಷ್ಯವನ್ನು ಸಂರಕ್ಷಿಸೋಣ.”
“ಇಂದು ಒಂದು ಇಂಗು ಗುಂಡಿ – ನಾಳೆಯ ನೀರಿನ ಭದ್ರತೆ!”
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, ಮಂಗಳೂರು ಉತ್ತರ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಎಸ್ ಡಿ ಎಂ ಸಿ   ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳು ನೀಡುತ್ತಿರುವ ಸಹಕಾರಕ್ಕೆ ಶಾಲೆಯು ಕೃತಜ್ಞತೆ ಸಲ್ಲಿಸಿದೆ.  ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಂಡು ಕಾಸರಗೋಡು ಹಾಗೂ ಮಹಾರಾಷ್ಟ್ರದ ಕೆಲವು ನಾಗರಿಕರು ಈ ಕಾರ್ಯಕ್ಕೆ ಸ್ಪಂದಿಸಿ  ಪ್ರಮಾಣ ಪತ್ರವನ್ನು  ಪಡೆದಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಇಂದಿರಾ ಎನ್ ರಾವ್, ವನಸಿರಿ ಇಕೋ ಕ್ಲಬ್ ನ ಸಂಚಾಲಕಿ ವಿನ್ನಿ ನಿರ್ಮಲಾ ಡಿಸೋಜಾ ಹಾಗೂ ಎಲ್ಲಾ ಶಿಕ್ಷಕರ ಪ್ರೇರಣೆಯಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

(ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತವಾಗಿ ನೀಡಿದ ಪ್ರಮಾಣ ಪತ್ರ)