ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ) ಕಿನ್ನಿಗೋಳಿ ಬಜಪೆ ಘಟಕ ಇವರ ವತಿಯಿಂದ ಪರಿಸರ ಕಾಳಜಿ ಕಾರ್ಯಕ್ರಮ
ಬಜಪೆ:ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ) ಕಿನ್ನಿಗೋಳಿ ಬಜಪೆ ಘಟಕ ಇವರ ವತಿಯಿಂದ ಪರಿಸರ ಕಾಳಜಿ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮತ್ತು ಪರಿಸರ ಅಧಿಕಾರಿ ಸಂತೋಷ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ "ಪರಿಸರವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಶುದ್ಧ ಗಾಳಿ, ನೀರು, ಮಣ್ಣು, ಮರಗಳು ಹಾಗೂ ಜೀವವೈವಿಧ್ಯ ನಮ್ಮ ಬದುಕಿಗೆ ಅತ್ಯಂತ ಅಗತ್ಯ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರವನ್ನು ಉಳಿಸುವುದು ಎಂದರೆ ನಮ್ಮ ಭವಿಷ್ಯವನ್ನು ಉಳಿಸುವುದು ಎಂಬ ಸಂದೇಶವನ್ನು ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರನ್ನು ಮಿತವಾಗಿ ಬಳಸುವುದು, ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಘಟಕದ ಮೇಲುಸ್ತುವಾರಿ ಅಧಿಕಾರಿ ಶ್ರೀಮತಿ ಗೀತಾ ಅವರು ಮಾತನಾಡಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಿಂದಲೇ ಪರಿಸರ ಕಾಳಜಿಯನ್ನು ಪ್ರಾರಂಭಿಸಿದರೆ ಸ್ವಚ್ಛ, ಹಸಿರು ಮತ್ತು ಸುಂದರ ಪರಿಸರವನ್ನು ನಿರ್ಮಿಸಬಹುದು ಎಂದರು.
ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಶಾಲಾ ಪರಿಸರದಲ್ಲಿ ಪೇರಳೆ, ಜಂಬು ನೆಲ್ಲಿಕಾಯಿ ಇತ್ಯಾದಿ ಉತ್ತಮ ಜಾತಿಯ ಗಿಡಗಳನ್ನು ನೆಡಲಾಯಿತು.
ಬಹುಮಾನ ವಿಜೇತರ ಹೆಸರನ್ನು ಶ್ರೀಮತಿ ಚಿತ್ರಾಶ್ರೀ ವಾಚಿಸಿದರು. ಸುವಿಧ ಸಹಾಯಕಿ ಶ್ರೀಮತಿ ಆಶಾ, ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ ,ಶಿಕ್ಷಕರಾದ ಪೂರ್ಣಿಮಾ ಜ್ಯೋತಿ ಜಯಂತಿ ವಿದ್ಯಾಲತಾ ವಿದ್ಯಾಗೌರಿ ಡಾ.ಅನಿತ್ ಕುಮಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.