Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ವಾಮಂಜೂರಿನಲ್ಲಿ ಕಿಸಾನ್ ಗೋಷ್ಠಿ–ಕೆಸರ್‌ಡೊಂಜಿ ದಿನ

ಗುರುಪುರ: ರೈತರಿಗೆ ಉತ್ತೇಜನ ನೀಡುವ ಜೊತೆಗೆ ಕೃಷಿ ಕ್ಷೇತ್ರದ ಸರ್ಕಾರಿ ಯೋಜನೆಗಳು ಹಾಗೂ ಅಗತ್ಯ ಸಲಕರಣೆಗಳು ಯಾವುದೇ ವಿಳಂಬವಿಲ್ಲದೆ ರೈತರಿಗೆ ತಲುಪಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ಕೃಷಿ ಇಲಾಖೆ, ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ‘ಆತ್ಮ’ ಯೋಜನೆಯಡಿ ಆಯೋಜಿಸಲಾದ ಕಿಸಾನ್ ಗೋಷ್ಠಿ ಮತ್ತು ಕೆಸರ್‌ಡೊಂಜಿ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಅನೇಕರು ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಉದ್ಯಮಗಳು ಎಷ್ಟೇ ಬಂದರೂ ಮನುಷ್ಯನ ಬದುಕಿಗೆ ಕೃಷಿ ಮತ್ತು ಆಹಾರದ ಮಹತ್ವ ಕಡಿಮೆಯಾಗುವುದಿಲ್ಲ. ರೈತರಿಗೆ ಸರ್ಕಾರಿ ಯೋಜನೆಗಳು ಅಲೆದಾಟವಿಲ್ಲದೆ ಸುಲಭವಾಗಿ ತಲುಪುವ ವ್ಯವಸ್ಥೆ ಅಗತ್ಯ ಎಂದು ಡಾ. ಭರತ್ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕೋಣಗಳಿಂದ ಉಳುಮೆ ಹಾಗೂ ನೇಜಿ ನಾಟಿ ನಡೆಯಿತು. ‘ಆತ್ಮ’ ಯೋಜನೆಯ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಮಾಹಿತಿ ನೀಡಿದರು.

ಶಾಸಕ ಡಾ. ಭರತ್ ಶೆಟ್ಟಿ ಸೇರಿದಂತೆ ಗಣ್ಯರನ್ನು ಗೌರವಿಸಲಾಯಿತು. ಯಶಸ್ವಿ ಕೃಷಿಕರನ್ನು ಸನ್ಮಾನಿಸಿ, ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.

ಕೆಸರ್‌ಡೊಂಜಿ ದಿನದ ಅಂಗವಾಗಿ ನಡೆದ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಶಾಲಾ ಮಕ್ಕಳು, ಯುವಕರು ಹಾಗೂ ಹಿರಿಯರು ಭಾಗವಹಿಸಿದರು. ಕೃಷಿ ಮತ್ತು ತೋಟಗಾರಿಕಾ ಉಪಕರಣಗಳ ಪ್ರದರ್ಶನವೂ ನಡೆಯಿತು.