ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ
ತೋಕೂರು:ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ (ಮೈ ಭಾರತ್) ದ.ಕ. ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ. ಜಿಲ್ಲೆ, ತಾಲೂಕು ಹಾಗೂ ಜಿಲ್ಲಾ ಯುವಜನ ಒಕ್ಕೂಟ ದ.ಕ. ಜಿಲ್ಲೆ ಇವರ ಮಾರ್ಗದರ್ಶನದಲ್ಲಿ,
ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ಹಾಗೂ
ಜಿಲ್ಲಾ, ರಾಜ್ಯ ಮತ್ತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.), ತೋಕೂರು–ಹಳೆಯಂಗಡಿ
ಇವರ ಸಂಯುಕ್ತ ಆಶ್ರಯದಲ್ಲಿ
ಅನುದಾನಿತ ಭಾರತ್ ಮಾತಾ ಹಿರಿಯ ಪ್ರಾಥಮಿಕ ಶಾಲೆ, ಪುನರೂರು ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವು ಆ.23 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಮಾರ್ಗದರ್ಶಕರು ಹಾಗೂ ಕೊಡುಗೈ ದಾನಿಗಳಾದ, ಪ್ರಸ್ತುತ ಬೆಂಗಳೂರಿನ ಸ್ಪೆಕ್ಟ್ರಮ್ ಕಂಪನಿಯನ್ನು ಮುನ್ನಡೆಸುತ್ತಿರುವ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಕಾತ್ಯಾಯಿನಿ ಆಳ್ವ ಉದ್ಘಾಟಿಸಿ
ಮಾತನಾಡಿ “ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸುವುದು ಕೇವಲ ಒಂದು ವಸ್ತುವನ್ನು ನೀಡುವ ಕಾರ್ಯಕ್ರಮವಲ್ಲ, ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಅರ್ಥಪೂರ್ಣ ಸೇವೆಯಾಗಿದೆ. ಶಿಕ್ಷಣವೇ ಮಕ್ಕಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಇಂತಹ ಸಹಾಯ ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುತ್ತಿರುವ ಸಂಸ್ಥೆಗಳ ಈ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲಯನ್ಸ್ ಕ್ಲಬ್ ಮೂಲ್ಕಿ ಅಧ್ಯಕ್ಷ ಲ. ಪ್ರವೀಣ್ ಶೆಟ್ಟಿ ಮಾತನಾಡಿ, “ಸ್ಕೂಲ್ ಬ್ಯಾಗ್ ವಿತರಿಸುವುದು ಅತ್ಯಂತ ಅರ್ಥಪೂರ್ಣವಾದ ಸಮಾಜಮುಖಿ ಸೇವೆಯಾಗಿದೆ. ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಎಂದರೆ ಅವರ ಭವಿಷ್ಯವನ್ನು ಉತ್ತಮಗೊಳಿಸುವ ಕಾರ್ಯಕ್ಕೆ ಕೈಜೋಡಿಸಿದಂತಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇಂತಹ ಸಹಾಯವು ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಸಮಾಜದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದಷ್ಟು ಸಹಕಾರ ನೀಡಬೇಕು” ಎಂದರು.
ಸ್ಪೋರ್ಟ್ಸ್ ಕ್ಲಬ್‌ನ ಗೌರವ ಅಧ್ಯಕ್ಷ ಲೀಲಾಧರ್ ಕಡಂಬೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಲಯನ್ಸ್ ಕ್ಲಬ್ ಮೂಲ್ಕಿ ವಲಯ-9, ವಲಯ-2ರ ಅಧ್ಯಕ್ಷ ಲಯನ್ ಸಂದೀಪ್ ಸುವರ್ಣ, ಶಾಲಾ ಮುಖ್ಯ ಶಿಕ್ಷಕಿ ಉಷಾ ಕೆ., ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುಗಂಧಿ ಕೊಂಡಾಣ ಹಾಗೂ ಶಾಲಾ ಪೋಷಕ ಸಮಿತಿ ಅಧ್ಯಕ್ಷೆ ಪವಿತ್ರಾ, ಜಂಟಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು
ಕಾತ್ಯಾಯಿನಿ ಆಳ್ವ, ಲಯನ್ ಪ್ರವೀಣ್ ಶೆಟ್ಟಿ, ಲಯನ್ ಸಂದೀಪ್ ಸುವರ್ಣ, ಗೌರವ ಅಧ್ಯಕ್ಷ ಲೀಲಾಧರ್ ಕಡಂಬೋಡಿ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಶೆಟ್ಟಿ ಹಾಗೂ ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದರು.
ಕಾರ್ಯಕ್ರಮಕ್ಕೆ ಹರಿಪ್ರಸಾದ್ ಶೆಟ್ಟಿ, ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಮತ್ತು ಲಿಯೋ ಕ್ಲಬ್ ಮೂಲ್ಕಿ ಸ್ಕೂಲ್ ಬ್ಯಾಗ್‌ಗಳನ್ನು ನೀಡಿ ಸಹಕರಿಸಿದರು.
ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ವಿ. ಅಂಚನ್ ಮತ್ತು ಮಹಿಳಾ ಸದಸ್ಯೆ ಪ್ರಮೀಳಾ ಹರೀಶ್ ಪ್ರಾರ್ಥನೆ ನೆರವೇರಿಸಿದರು.
ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.