ತೋಕೂರು: ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ "ಆಟಿದ ನೆಂಪು - 2026" ಕಾರ್ಯಕ್ರಮ
ತೋಕೂರು: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೇರಾ ಯುವ ಭಾರತ್ (ಮೈ ಭಾರತ್ ದ.ಕ. ಜಿಲ್ಲೆ) ಇವರ ಮಾರ್ಗದರ್ಶನದಲ್ಲಿ, ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ 2021ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ), ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ "ಆಟಿದ ನೆಂಪು - 2026" ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಾಂಪ್ರದಾಯಿಕ ಉದ್ಘಾಟನೆ ಮತ್ತು ಅತಿಥಿ ಸ್ವಾಗತ
ಮಹಿಳಾ ಸದಸ್ಯೆಯರಾದ ಗೀತಾ ತಾರಾನಾಥ್, ಪವಿತ್ರಾ ಆಚಾರ್ಯ ಹಾಗೂ ಸುಷ್ಮಾ ಆಚಾರ್ಯ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅತಿಥಿ ಗಣ್ಯರನ್ನು ತುಳುನಾಡಿನ ಸಂಪ್ರದಾಯದಂತೆ ಮುಟ್ಟಾಳೆ ತೊಡಿಸಿ, ಶಾಲು ಹೊದೆಸಿ, ವೀಳ್ಯದೆಲೆ-ಅಡಿಕೆ ಹಾಗೂ ಎಳನೀರು ನೀಡಿ ಸ್ವಾಗತಿಸಲಾಯಿತು.
ರೋಟರಿ ಕ್ಲಬ್ ಮೂಲ್ಕಿ ಮತ್ತು ತುಳು ವರ್ಲ್ಡ್ ಫೌಂಡೇಷನ್ ಕಟೀಲು ಇದರ ಅಧ್ಯಕ್ಷೆ ಭಾನುಮತಿ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಆಟಿ ಕೆಳೆಂಜನಿಗೆ ತೆಂಗಿನಕಾಯಿ ಮತ್ತು ಅಕ್ಕಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆಟಿ ತಿಂಗಳ ಕಟ್ಟುಪಾಡುಗಳು ಮತ್ತು ತುಳುನಾಡಿನ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು.
ಆಚಾರ-ವಿಚಾರಗಳ ಮೆಲುಕು ಹಾಗೂ ಅಧ್ಯಕ್ಷೀಯ ನುಡಿ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಕೃಷಿಕರಾದ ಸತೀಶ್ ಶೆಟ್ಟಿ ಬೈಲಾಗುತ್ತು ಪಂಜ ಅವರು ಆಷಾಢ ತಿಂಗಳ ಆಚಾರ-ವಿಚಾರಗಳು ಹಾಗೂ ನಮ್ಮ ಪೂರ್ವಜರ ಜೀವನ ಕ್ರಮದ ಕುರಿತು ವಿವರಿಸಿದರು.
ಶ್ರವಣ್ ಕುಮಾರ್ ಮಂಗಳೂರು ಅವರು ಇಂತಹ ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಕದ್ರಿಹಿಲ್ಸ್ ಮಂಗಳೂರು ಇಲ್ಲಿನ ಅಧ್ಯಕ್ಷ ಲ. ಸುಧಾಕರ್ ಶೆಟ್ಟಿಗಾರ್ ಮಾತನಾಡಿ, ಆಟಿ ತಿಂಗಳ ಆರೋಗ್ಯಕರ ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳ ಮಹತ್ವವನ್ನು ವಿವರಿಸಿ, ಇಂತಹ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತೆ ಕರೆ ನೀಡಿದರು.
ಮಹಿಳಾ ಸದಸ್ಯೆ ಉಷಾ ಸಾಲ್ಯಾನ್ ಆಟಿದ ತಿನಸುಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸ್ಪೋರ್ಟ್ಸ್ ಕ್ಲಬ್‌ನ ಗೌರವ ಅಧ್ಯಕ್ಷ ಲೀಲಾಧರ್ ಕಡಂಬೋಡಿ, ಅಧ್ಯಕ್ಷ ಸುರೇಶ್ ಶೆಟ್ಟಿ , ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್ ,ಮೈ ಭಾರತ್ ದ.ಕ. ಜಿಲ್ಲೆಯ ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ, ಆಡಳಿತಾಧಿಕಾರಿ ಜಗದೀಶ್ ಕೆ., ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್ ವಂದಿಸಿದರು . ಗೌರವ ಮಾರ್ಗದರ್ಶಕ ನರೇಂದ್ರ ಕೆರೆಕಾಡು ಮತ್ತು ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ವೈವಿಧ್ಯಮಯ ಖಾದ್ಯಗಳು ಹಾಗೂ ಸಾಂಸ್ಕೃತಿಕ ಸಂಭ್ರಮ
ನೆರೆದಿದ್ದ ಸಾರ್ವಜನಿಕರಿಗೆ ಬೆಲ್ಲ, ಹುರಿಕಡಲೆ, ಕರಿಮೆಣಸಿನ ಕಷಾಯ ಹಾಗೂ ಹುರುಳಿಕಾಳಿನ ಲಡ್ಡುಗಳನ್ನು ನೀಡಲಾಯಿತು. ಜತೆಗೆ, ಆಟಿ ತಿಂಗಳ 48 ಬಗೆಯ ಖಾದ್ಯಗಳನ್ನೊಳಗೊಂಡ ಶುಚಿ-ರುಚಿಯಾದ ಭೋಜನವನ್ನು ಸುಮಾರು 280 ಕ್ಕೂ ಅಧಿಕ ಜನರಿಗೆ ಉಣಬಡಿಸಲಾಯಿತು. ತುಳುನಾಡಿನ ಹಳೆಯ ಕಾಲದ ಪರಿಕರಗಳ ಪ್ರದರ್ಶನ ಹಾಗೂ ಮಹಿಳಾ ಸದಸ್ಯೆಯರ ಜನಪದ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಆಷಾಢ ತಿಂಗಳ ಹಿನ್ನೆಲೆಯ ಬಗ್ಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಹರಿ.ಎಚ್. ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿಶೇಷವಾಗಿ ಅನಿರುದ್ಧ್ ಫೌಂಡೇಷನ್ ಸ್ಪೆಷಲ್ ಸ್ಕೂಲ್ ಮಂಗಳೂರು ಇಲ್ಲಿನ ಸುಮಾರು 30 ವಿಶೇಷ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.