ಮುಲ್ಕಿ: ಭಾರೀ ಮಳೆ -ಬಪ್ಪನಾಡಿನಲ್ಲಿ ಕೃತಕ ನೆರೆ
ಮುಲ್ಕಿ:ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿತು
ಭಾರೀ ಮಳೆಗೆ ಮುಲ್ಕಿ ನಗರ ವ್ಯಾಪ್ತಿಯ ಬಪ್ಪನಾಡು ಹೆದ್ದಾರಿ ಬಳಿ ಕೃತಕ ನೆರೆ ಉಂಟಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಯಿತು
ಈ ಭಾಗದಲ್ಲಿ ಕಳೆದ ಕೆಲ ತಿಂಗಳಿನಿಂದ ದೇವಸ್ಥಾನದ ದ್ವಾರ ಸ್ಥಳಾಂತರಗೊಳಿಸುವ ಕಾರ್ಯ ನಿದಾನಗತಿಯಲ್ಲಿ ನಡೆಯುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಪ್ರತೀ ಮಳೆಗೆ ಕೃತಕ ನೆರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುಲ್ಕಿ ಪರಿಸರದ ಮಳೆ ನೀರು ಬಪ್ಪನಾಡು ದ್ವಾರ ಬಳಿಯ ರಾಜಕಾಲುವೆ ಯಲ್ಲಿ ಹರಿಯುತ್ತಿದ್ದು ಸೂಕ್ತವಾಗಿ ನೀರು ಹರಿಯದೆ ಕೃತಕ ನೆರೆ ಉಂಟಾಗುತ್ತಿದೆ
ಇದರಿಂದಾಗಿ ದೇವಸ್ಥಾನದ ದ್ವಾರದ ಬಳಿ ನಿರ್ಮಾಣವಾಗಿರುವ ಪರ್ಯಾಯ ರಸ್ತೆಯಲ್ಲಿ ಭಾರೀ ಮಳೆ ನೀರು ತುಂಬಿ ಕಾರು ಸಹಿತ ದ್ವಿಚಕ್ರವಾಹನಗಳಿಗೆ ಹಾಗೂ ಭಕ್ತರಿಗೆ ನಡೆದುಕೊಂಡು ಹೋಗಲು ತೀವ್ರ ತೊಂದರೆಯಾಗಿ ವಾಹನಗಳು ಸುತ್ತು ಬಳಸಿ ಸಂಚಾರ ನಡೆಸಿದವು
ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ,ತೋಕೂರು, ಪಕ್ಷಿಕೆರೆ, ಕಿನ್ನಿಗೋಳಿ,ಬಳ್ಕುಂಜೆ, ಅತಿಕಾರಿಬೆಟ್ಟು, ಪರಿಸರದಲ್ಲಿ ಬೆಳಿಗ್ಗೆ ಭಾರೀ ಮಳೆಯಾಗಿದ್ದು ಕೆಲ ಕಡೆ ವಿದ್ಯುತ್ ಅಸ್ತವ್ಯಸ್ತಗೊಂಡಿತ್ತು.