ಮುಲ್ಕಿ: ಮಿನಿ ಗೂಡ್ಸ್ ಟೆಂಪೋ ಹಾಗೂ ಕಾರು ಅಪಘಾತ,ಕಾರು ಪಲ್ಟಿ -5 ಮಂದಿ ಪವಾಡ ಸದೃಶ ಪಾರು
ಮುಲ್ಕಿ: ಮಿನಿ ಗೂಡ್ಸ್ ಟೆಂಪೋ ಗೆ ಕಾರೊಂದು ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂರು ಜನ ಹಾಗೂ ಟೆಂಪೋ ದಲ್ಲಿದ್ದ ಇಬ್ಬರು ಸೇರಿ ಐದು ಜನ ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೊಲ್ನಾಡು ಬಳಿ ಸಂಭವಿಸಿದೆ.
ಗಾಯಾಳುಗಳನ್ನು ಬೆಂಗಳೂರು ಡಾಲರ್ಸ್ ಕಾಲೋನಿ ನಿವಾಸಿಗಳಾದ ಸಂಪತ್ ಶೆಟ್ಟಿ ( 69), ಮಮತಾ ಶೆಟ್ಟಿ(60) ಸುಮಿತ್ರ (28) ಹಾಗೂ ಟೆಂಪೋ ಚಾಲಕ ಬಷೀರ್ (42), ಆಸಿಫ್ (23) ಎಂದು ಗುರುತಿಸಲಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ
ಬೆಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಕೋಲ್ನಾಡ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ಸೀದಾ ಎಡಬದಿಗೆ ಚಲಿಸಿ ಹೆದ್ದಾರಿ ಬದಿ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದ ಮಿನಿ ಗೂಡ್ಸ್ ಟೆಂಪೋ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿ ಚರಂಡಿಗೆ ಬಿದ್ದಿದ್ದು ,ಟೆಂಪೋ ಮೇಲ್ಬಾಗ ಕತ್ತರಿಸಲ್ಪಟ್ಟು ಹೆದ್ದಾರಿ ಡಿವೈಡರ್ ಮೇಲೆ ಬಿದ್ದಿದೆ.
ಅಪಘಾತದ ಸಂದರ್ಭ ಸಾಮಾಜಿಕ ಕಾರ್ಯಕರ್ತ ನಿರಂಜನ್ ಹರಿಪಾದೆ ಹಾಗೂ ಮತ್ತಿತರರು ರವರು ಕಾರಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಯಿತು.
ಕೂಡಲೇ ಹೆದ್ದಾರಿ ಇಲಾಖೆಯ ಸಿಬ್ಬಂದಿ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರ್ಯಪ್ರವೃತ್ತರಾಗಿ ವಾಹನ ಸಂಚಾರ ನಿಯಂತ್ರಿಸಿದರು ಬಳಿಕ ಕ್ರೇನ್ ಮೂಲಕ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಯಿತು
ಕೋಲ್ನಾಡ್ ರಾಷ್ಟ್ರೀಯ ಹೆದ್ದಾರಿ ಬದಿ ಅಪಾಯಕಾರಿ ಪ್ರದೇಶದಲ್ಲಿ ಹಣ್ಣು ಹಂಪಲು ಮಾರಾಟಗಾರರು ಹಾಗೂ ಕೆಲ ಲಾರಿ ಚಾಲಕರು ನಿಲ್ಲಿಸುತ್ತಿರುವುದರಿಂದ ಅಪಘಾತಗಳು ನಡೆಯುತ್ತಿದ್ದು ನಿಯಂತ್ರಿಸಲು ಪೊಲೀಸರು ಮುಂದಾಗಬೇಕು ಎಂದು ಸ್ಥಳೀಯರಾದ ದಿನೇಶ್ ಕೊಲ್ನಾಡ್ ಆಗ್ರಹಿಸಿದ್ದಾರೆ.