ಮಕ್ಕಳಲ್ಲಿ ದೇವರನ್ನು ಕಾಣುವ, ದೇವರ ಕುರಿತು ಮಕ್ಕಳಿಗೆ ತಿಳಿಸುವ ಕೃಷ್ಣವೇಷ- ಹರಿಕೃಷ್ಣ ಪುನರೂರು
ಕಿನ್ನಿಗೋಳಿ : ಕೃಷ್ಣ ವೇಷ ಹಾಕಿಸುವ ಮೂಲಕ ಮಕ್ಕಳಲ್ಲಿ ದೇವರನ್ನು ಕಾಣುವ ಹಿರಿಯರು ಒಂದೆಡೆಯಾದರೆ, ದೇವರ ಕುರಿತು ಮಕ್ಕಳಿಗೆ ತಿಳಿಸಿಕೊಡುವ ದೃಷ್ಟಿಯಿಂದ ಕೃಷ್ಣವೇಷ ಸ್ಪರ್ಧೆಗಳು ಪ್ರೇರಣೆಯಾಗಲಿ ಎಂದು ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರು ಕೊಡೆತ್ತೂರು ದೇವಸ್ಯ ಮಠದಲ್ಲಿ ಆಯೋಜಿಸಲಾದ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಇದೇ ಸಂದರ್ಭ ಐವತ್ತು ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಹೆಚ್ಚು ಕೃಷಿಕ ಪ್ರವೀಣ್ ಶೆಟ್ಟಿ ಹಾಗೂ ಪಿಎಚ್‌ಡಿ ಪದವಿ ಪಡೆದ ಡಾ. ಹರ್ಷ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀ ನಾರಾಯಣ ಆಸ್ರಣ್ಣ, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ದೇವಿ ಪ್ರಸಾದ್ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ಅಮೂಲ್ಯ ಶೆಟ್ಟಿ, ಸುಧಾ ಉಡುಪ, ಕಾರ್ತಿಕೇಯ ಉಡುಪ, ಕಾಂಚನ ಭಟ್, ಸೌಮ್ಯ ಉಡುಪ ಮುಂತಾದವರಿದ್ದರು. ಸಂಘಟಕ ವೇದವ್ಯಾಸ ಉಡುಪ ಸ್ವಾಗತಿಸಿದರು. ಸುರೇಶ್ ಉಡುಪ ನಿರೂಪಿಸಿದರು.
ವಿವಿಧ ವಿಭಾಗಗಳಲ್ಲಿ ನಡೆದ ಕೃಷ್ಣವೇಷ ಸ್ಪಧೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.