Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

ಕಟೀಲು : ಬ್ರಾಹ್ಮಣರಿಂದ ಉಪಕೃತರಾದವರೆ ಬಳಿಕ ನಿಂದಿಸುತ್ತಾರೆ. ಟೀಕೆಗಳಿಗೆ ಕಿವಿಗೊಡದೇ ಬ್ರಾಹ್ಮಣರು ಸಾಧನೆಯತ್ತ ಸಾಗಬೇಕು. ಸಮಾಜಕ್ಕೆ ದಾರಿ ದೀಪದಂತೆ ನಮ್ಮ ನಡೆ ಇರಬೇಕು. ಜೀವನವನ್ನು ಕರ್ತವ್ಯದಂತೆ 
ನಡೆಸಿಕೊಂಡು ಹೋದಾಗ ಜೀವನ ಯಜ್ಞ ಸಾರ್ಥಕವಾಗುತ್ತದೆ. ಗೌರವಯುತ ವ್ಯಕ್ತಿತ್ವದ  ಬದುಕಿನ ಮೂಲಕ, ಆಚರಣೆಗಳಿಂದ ಉನ್ನತರಾಗೋಣ. ಉತ್ತಮ  ಸಮಾಜಕ್ಕಾಗಿ ಬದುಕೋಣ. ಹಿರಿಯರನ್ನು ಗೌರವಿಸೋಣ. ಪ್ರಕೃತಿಯನ್ನು ರಕ್ಷಿಸೋಣ.  ಇದು ಬ್ರಾಹ್ಮಣ್ಯದ ಕರ್ತವ್ಯ ಎಂದು ವಿದ್ವಾನ್ ಸಂತೋಷ್ ಕುಮಾರ್ ಭಟ್ ಭಕ್ರೆಮಠ ಹೇಳಿದರು. 
ಅವರು ಕಟೀಲು ಸಾನಿಧ್ಯ ಸಭಾ ಭವನದಲ್ಲಿ ನಡೆದ ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸಭಾದ ಅಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್ ಮಾತನಾಡಿ ಬ್ರಾಹ್ಮಣರನ್ನು ತುಳಿಯುವ ಕೆಲಸ ಎಲ್ಲೆಡೆ ಆಗುತ್ತಿದೆ. ಸಂಘಟನೆಯ ಜೊತೆಗೆ ನಮ್ಮ ಆಚಾರಗಳನ್ನು ಬಿಡದೆ ಸಾಧನೆಯಿಂದ ಬೆಳೆಯೋಣ ಎಂದರು. 
ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಮಂಗಳಾ ಮತ್ತು ಸುರೇಶ್ ಭಟ್, ಪೌರೋಹಿತ್ಯ ದಂಪತಿಗಳಾದ ಲಕ್ಷ್ಮೀನಾರಾಯಣ ಆಚಾರ್ 
ಹಾಗೂ ಲಕ್ಮೀ, ಎಕ್ಕಾರು ಹರಿದಾಸ ಉಡುಪ ಹಾಗೂ ಯಶೋದಾ, ವಾಯುಸೇನೆಯಲ್ಲಿದ್ದ ಶ್ರೀಕಾಂತ ಶರ್ಮಾ ಹಾಗೂ  ಸುಹಾಸಿನಿ ದಂಪತಿಗಳನ್ನು   ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ಸಾಧಕರಾದ ಪ್ರಜ್ಞಾ ರಾವ್ ಎಕ್ಕಾರು, ಮನ್ವಿತ್ ಉಡುಪ, ಚ್ಯವನ ಉಡುಪ, ನಮಿತ್ ಉಡುಪ ಇವರನ್ನು ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತ ರಾವ್, ಸಿಎ ಸುಪರ್ಣ, ದೀಪ್ತಿ ಮರಾಠೆ ಯವರನ್ನು ಗೌರವಿಸಲಾಯಿತು. 
ಮುಂಡ್ಕೂರು ದೇಗುಲದ ಅರ್ಚಕ ರಾಮದಾಸ ಆಚಾರ್ಯ, ಕಟೀಲು ದೇಗುಲದ ಅರ್ಚಕ ಗೋಪಾಲಕೃಷ್ಣ ಅಸ್ರಣ್ಣ, ಅಜಾರು ನಾಗರಾಜ ರಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಕೊಡೆತ್ತೂರು ವೇದವ್ಯಾಸ ಉಡುಪ, ದೇವಿಪ್ರಕಾಶ ರಾವ್ ಮತ್ತಿತರರಿದ್ದರು. 
ಸುಮಂಗಲ ಭಟ್, ಸುಧಾ ಉಡುಪ, ಪ್ರಭಾಕರ ರಾವ್, ಅರುಣ್ ರಾವ್ ಸನ್ಮಾನ ಪತ್ರ ವಾಚಿಸಿದರು. ಮಲ್ಲಿಕಾ ರಾವ್, ರಸನಾ ಉಡುಪ ವಿಜೇತರ ಪಟ್ಟಿ ವಾಚಿಸಿದರು.
ಪು. ಗುರುಪ್ರಸಾದ ಭಟ್ ನಿರೂಪಿಸಿದರು.
ಸಂಘದ ಸದಸ್ಯರಿಂದ ಯಕ್ಷಗಾನ ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು.