Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ನಂದಿನೀ ಗವ್ಯಂ ಉದ್ಘಾಟನೆ


ಕಟೀಲು : ದೇಸೀ ದನಗಳ ಉತ್ಪನ್ನಗಳನ್ನು ದಿನ ಬಳಕೆಯಲ್ಲಿ ಉಪಯೋಗಿಸುವ ಮೂಲಕ ಆರೋಗ್ಯವಂತರಾಗೋಣ. ಜೊತೆಗೆ ದೇಸೀ ತಳಿಗಳನ್ನು ಉಳಿಸೋಣ. ಕಟೀಲು ದೇಗುಲ ಮೂರು ಗೋಶಾಲೆಗಳನ್ನು ನಡೆಸುತ್ತಿದ್ದು ಪ್ರಸ್ತುತ ವರ್ಷ ರೂ.೯೧ ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವೆಚ್ಚ ಮಾಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ನಾಲ್ಕ ದಿನಗಳ ಕಾಲ ನಡೆಯಲಿರುವ ಗೋಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಂದಿನೀ ಗವ್ಯಂ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ತಾಳಿಪಾಡಿ ಪಾಂಚಜನ್ಯ ಗೋಶಾಲೆಯ ಮುರಳೀಧರ್ ಅವರು ಗೋಉತ್ಪನ್ನಗಳನ್ನು ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣರಿಗೆ ನೀಡಿ, ನಂದಿನೀ ಗವ್ಯಂ ಪ್ರದರ್ಶನ ಮಾರಾಟಕ್ಕೆ ಚಾಲನೆ ನೀಡಿದರು.
ತಾಳಿಪಾಡಿಯ ಗೋಸೇವಕ ಶ್ರೀಧರ್ ಮಾತನಾಡಿ ಕಟೀಲಿನಲ್ಲಿ ದೇವ ಲೋಕದ ನಂದಿನೀ ನದಿಯಾಗಿ ಹರಿದ ಕಥೆಯಿದೆ. ಕಟೀಲು ದೇಗುಲವು ಸ್ವತಃ ಗೋಶಾಲೆಯನ್ನು ನಡೆಸುವುದಲ್ಲದೆ, ದೇಸೀ ಗೋವುಗಳ ಉಳಿಸುವಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ರಾಜ್ಯದ ನಾನಾ ಗೋಶಾಲೆಗಳು, ಗೋಉತ್ಪಾದಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಇಂತಹ ಮೇಳವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಗೋಉತ್ಪನ್ನ ತಯಾರಕರಾದ ಶಿವಕುಮಾರ್, ಡಾ. ಜೀವನ್‌ಕುಮಾರ್ ಮುಂತಾದವರಿದ್ದರು.
ಮೈಸೂರು, ದೊಡ್ಡಬಳ್ಳಾಪುರ, ಉಡುಪಿ, ಮಂಗಳೂರು, ಕುಂದಾಪುರ, ಮೊದಲಾದ ಕಡೆಗಳಿಂದ ಬಂದಿರುವ ಗೋಉತ್ಪನ್ನ ತಯಾರಕರು ಈ ಮೇಳದಲ್ಲಿದ್ದು, ತುಪ್ಪ, ಗೋಮಯ, ಸಾಬೂನು, ವಿವಿಧ ಔಷಧಿಗಳು, ಗೋಮೂತ್ರ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ವಿಧಧ ಉತ್ಪನ್ನಗಳನ್ನು ಪ್ರದರ್ಶನ, ಮಾರಾಟಕ್ಕೆ ಇಟ್ಟಿದ್ದಾರೆ.