Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಗ್ರಾಮೀಣ ಕ್ರೀಡೆಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕಾರ್ಯವಾಗಲಿ” – ನಳಿನ್ ಕುಮಾರ್ ಕಟೀಲು

ಕಿನ್ನಿಗೋಳಿ: ನಂದಿನಿ ಯುವಕ ಮಂಡಲದ ವತಿಯಿಂದ ಆಯೋಜಿಸಲಾದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ಯುವಕರು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಮನರಂಜನಾ ಹಾಗೂ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಟೀಲು ದೇವಳದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು, “ಕೆಸರುಗದ್ದೆಯ ಕ್ರೀಡೆಗಳು ನಮ್ಮ ಗ್ರಾಮೀಣ ಬದುಕು, ಕೃಷಿ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿವೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು” ಎಂದು ಹೇಳಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, “ಯುವಕರನ್ನು ಒಗ್ಗೂಡಿಸಿ, ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕ್ರೀಡೋತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಯುವಜನರು ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು” ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ದೀಕ್ಷಿತ್, ಶ್ರೇಯ ಹಾಗೂ ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, SIR ಪ್ರಕ್ರಿಯೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಹರಿಣಿ ಹಾಗೂ ರಾಜೇಶ್ವರಿ ಅವರನ್ನು ಗೌರವಿಸಲಾಯಿತು.

ಕ್ರೀಡೋತ್ಸವದಲ್ಲಿ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಿವಿಧ ರೀತಿಯ ಕೆಸರುಗದ್ದೆ ಕ್ರೀಡೆಗಳು ಹಾಗೂ ಮನರಂಜನಾ ಸ್ಪರ್ಧೆಗಳು ನಡೆದವು. ಗ್ರಾಮೀಣ ಕ್ರೀಡಾ ಸೊಗಡಿನೊಂದಿಗೆ ನಡೆದ ಸ್ಪರ್ಧೆಗಳು ನೆರೆದಿದ್ದವರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಮೋದ್ ಕುಮಾರ್ ಕಿನ್ನಿಗೋಳಿ, ಈಶ್ವರ್ ಕಟೀಲು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತಾ ರಾವ್ ಕಟೀಲು, ಸದಸ್ಯರಾದ ಲೋಕಯ್ಯ ಸಾಲ್ಯಾನ್ ಕೊಂಡೇಲಾ, ಮಲ್ಲಿಕಾ ಪ್ರಕಾಶ್, ಮಲ್ಲಿಕಾ ಗುತ್ತಕಾಡು, ಪ್ರಣಿಕ್ ಕಿನ್ನಿಗೋಳಿ, ಕೊಣಗಳ ಯಜಮಾನ ಪ್ರಸಾದ್ ಶೆಟ್ಟಿ ಕಿನ್ಲಚ್ಚಿಲ್, ಸೀತಾರಾಮ ಶೆಟ್ಟಿ ಕಟೀಲು, ಆದರ್ಶ್ ಎಕ್ಕಾರು, ಹರೀಶ್ ಸಾಂತ್ಯ, ಸುಜನ್ ದಾಸ್, ಶೇಖರ ಶೆಟ್ಟಿ ಕೆರಮ, ಶ್ರೀನಿವಾಸ ಶೆಟ್ಟಿ, ಅಭಿಲಾಷ್ ಶೆಟ್ಟಿ ಕಟೀಲು, ನಂದಿನಿ ಮಹಿಳಾ ಮಂಡಲದ ಅಧ್ಯಕ್ಷೆ ಯೋಗಿನಿ, ದರ್ನಪ್ಪ ಶೆಟ್ಟಿ ತಂಡ್ರಾಪು, ಗಣೇಶ್ ಶೆಟ್ಟಿ ಮಿತ್ತಬೈಲು ಗುತ್ತು, ಶೇಖರ್ ಅಜಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೋಶನ್ ಸನ್ಮಾನಪತ್ರ ವಾಚಿಸಿದರು. ನಂದಿನಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಗುರುರಾಜ್ ಮಲ್ಲಿಗೆಯಂಗಡಿ ಸ್ವಾಗತಿಸಿದರು. ದುರ್ಗಾಪ್ರಸಾದ್ ಕೊಂಡೇಲ ಹಾಗೂ ಪ್ರವೀಣ್ ಕೊಂಡೇಲ ಕಾರ್ಯಕ್ರಮ ನಿರೂಪಿಸಿದರು.