ಕಟೀಲು ಮೇಳದ ಕಲಾವಿದರಲ್ಲಿಗೆ ಸುಹೃದ್‌ಯಾನ
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದತ ದಶಾವತಾರ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದು, ನಿವೃತ್ತರಾಗಿರುವ 70 ವರ್ಷ ಮೀರಿದ ಕಲಾವಿದರ ಮನೆಗೆ ಭೇಟಿ ನೀಡಿ ಅವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆಯುವ ಕಟೀಲು ಮೇಳದ ಅಭಿಮಾನಿಗಳ ಯಕ್ಷಕುಶಲೋಪರಿ- ಸುಹೃದಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್, ಕಲಾವಿದರಿಗೆ ನೀಡುವ ಶ್ರೀದೇವರ ಪ್ರಸಾದ, ಗೌರವಧನ ಇತ್ಯಾದಿಗಳನ್ನು ಕಟೀಲು ಮೇಳದ ಅಭಿಮಾನಿಗಳಿಗೆ ಹಸ್ತಾಂತರಿಸಿ, ಸುಹೃದ್‌ಯಾನಕ್ಕೆ ಶುಭಹಾರೈಸಿದರು.
ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶಿಕ್ಷಕರು ನಿವೃತ್ತಿಯ ಅನಂತರ ಏಕಾಂತದಲ್ಲಿ ಅನುಭವಿಸುವ ಸಂಕಟದಂತೆ, ಕಲಾವಿದರೂ ರಂಗಸ್ಥಳದಲ್ಲಿ ಕಲಾಸೇವೆಗೈದು ವಯಸ್ಸಾದ ಬಳಿಕ ನಿವೃತ್ತರಾಗಿರುತ್ತಾರೆ. ಆ ಸಂದರ್ಭ ಅವರನ್ನು ಕುಟುಂಬದ ಸದಸ್ಯರಂತೆ ಮಾತಾಡಿಸುವ ಚಿಂತನೆ ನಿಜಕ್ಕೂ ಅಭಿನಂದನೀಯ. ತಾನು ಕೂಡ ಹೀಗೆ ಹಿರಿಯ ಕಲಾವಿದರಲ್ಲಿಗೆ ಹೋದಾಗ ವಿದುರನ ಮನೆಗ ಕೃಷ್ಣ ಹೋದಂತೆ ಎಂಬಂತೆ ಕಲಾವಿದರ ಸಂಭ್ರಮವನ್ನು ಅನುಭವಿಸಿದವ. ಕಟೀಲು ಮೇಳಗಳು ಯಾವತ್ತಿಗೂ ತೆರೆದುಕೊಂಡ ಮುಕ್ತಮನಸ್ಸಿನಿಂದ ಬದಲಾವಣೆಗಳಿಗೆ, ಹೊಸತನಕ್ಕೆ, ಕಲಾವಿದರೆಡೆಗೆ ಕಾಳಜಿಗೆ, ಯಕ್ಷಗಾನ ಕಲೆಯ ಉಳಿವಿಗೆ ಪ್ರಯತ್ನಶೀಲವಾಗಿಯೇ ಇದೆ. ಕಟೀಲು ದೇಗುಲ ಇದಕ್ಕೆ ಪೂರಕವಾಗಿ ಅನೇಕ ಯೋಜನೆಗಳನ್ನು ಮಾಡುತ್ತಲೇ ಬಂದಿರುವುದು ಮಾದರಿ ಎಂದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇವರ ಸೇವೆಯನ್ನು ಯಕ್ಷಗಾನದ ಮೂಲಕ ಮಾಡಿದ ಕಲಾವಿದರ ಕುಶಲೋಪರಿಯ ಕಾರ್ಯ ನಿರಂತರವಾಗಬೇಕು. ಇಂತಹ ಯಕ್ಷಗಾನದ ಕಾರ್ಯವನ್ನು ಕಟೀಲು ದೇವಸ್ಥಾನ ನಾನಾ ರೀತಿಯಲ್ಲಿ ಮಾಡುತ್ತ ಬಂದಿದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಕಿಶೋರ್ ಕುಮಾರ್ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್‌ದಾಸ್ ಭಂಡಾರಿ ಮತ್ತಿತರರಿದ್ದರು.