ಆ.27 ರಿಂದ 30 : ಕಟೀಲಿನಲ್ಲಿ ನಂದಿನೀ ಗವ್ಯಮ್ ಉತ್ಪನ್ನಗಳ ಪ್ರದರ್ಶನ, ಮಾರಾಟ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಟೀಲು ಸರಸ್ವತೀ ಸದನದಲ್ಲಿ ಆಗಸ್ಟ್ ೨೭ರಿಂದ ೩೦ರವರೆಗೆ ನಾಲ್ಕು ದಿನಗಳ ಕಾಲ ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ, ಜಾಗೃತಿ, ಮಾಹಿತಿ ಶಿಬಿರ ನಂದಿನೀ ಗವ್ಯಮ್ ನಡೆಯಲಿದೆ. ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು ಹೀಗೆ ರಾಜ್ಯದ ನಾನಾ ಭಾಗಗಳಿಂದ ಗೋಶಾಲೆಯವರು, ಗೋಉತ್ಪನ್ನ ತಯಾರಕರು ಭಾಗವಹಿಸಲಿದ್ದಾರೆ. ಕಳೆದ ಮೂರು ವರುಷಗಳಿಂದ ನಂದಿನೀ ಗವ್ಯಮ್ ಆಯೋಜನೆ ಮಾಡಲಾಗುತ್ತಿದ್ದು, ಮಜ್ಜಿಗೆ, ತುಪ್ಪ, ಧೂಪ, ಲೋಬಾನ, ಗೋಮಯ, ಪೂಜಾ ಗೋಮೂತ್ರ ಇತ್ಯಾದಿ ಪೂಜಾ ಸಾಮಗ್ರಿಗಳು, ಅರ್ಕ, ಶಾಂಪೂ, ಮುಲಾಮು ತಲೆಗೆ ಹಾಕುವ ಎಣ್ಣೆ, ನೋವು ನಿವಾರಕ ಎಣ್ಣೆ, ದಂತಮಂಜನ-ಹಲ್ಲುಪುಡಿ, ಸ್ನಾನದ ಸಾಬೂನು, ಫೇಸ್ ಕ್ರೀಮ್ ಇತ್ಯಾದಿ ಆರೋಗ್ಯ ಸಂಬಂಧಿ ವಸ್ತುಗಳು, ಗೃಹೋಪಯೋಗಿ ಉತ್ಪನ್ನಗಳು, ಮೊಬೈಲ್ ಸ್ಟ್ಯಾಂಡ್, ಮೊಬೈಲ್ ರೇಡಿಯೇಷನ್ ಚಿಪ್, ಕೀಚೈನ್, ಜೀರ್ಣ ಚೂರ್ಣ, ಜೀವಾಮೃತ ಇತ್ಯಾದಿ ಇತ್ಯಾದಿ ಗೋಉತ್ಪನ್ನಗಳು, ಪಂಚಗವ್ಯ ಆರೋಗ್ಯ ಚಿಕಿತ್ಸೆ ಉತ್ಪನ್ನಗಳು, ದಿನನಿತ್ಯ ಉಪಯೋಗಿ ಪಂಚಗವ್ಯ ಉತ್ಪನ್ನಗಳು, ಕೃಷಿ ಪಂಚಗವ್ಯ ಹೀಗೆ ನಾನಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.
ಗೋವಿಗೆ ಮಹತ್ವ
ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿಯುತ್ತಿರುವ ಕಟೀಲು ಕ್ಷೇತ್ರದಲ್ಲಿ ಗೋಪೂಜೆಗೆ ವಿಶೇಷ ಮಹತ್ವವಿದೆ. ೨೦೦ಕ್ಕೂ ಮಿಕ್ಕಿ ದೇಸೀ ಹಸುಗಳಿರುವ ಮೂರು ಗೋಶಾಲೆಗಳನ್ನು ನಡೆಸುತ್ತಿರುವ ಶ್ರೀ ಕ್ಷೇತ್ರದ ವತಿಯಿಂದ ರಾಜ್ಯದ ವಿವಿಧ ಗೋಶಾಲೆಗಳ ಹಾಗೂ ಗೋಉತ್ಪನ್ನಗಳ ತಯಾರಕರಿಂದ ಪ್ರದರ್ಶನ, ಮಾರಾಟ, ಜಾಗೃತಿ, ಮಾಹಿತಿ ಕಾರ‍್ಯಕ್ರಮ ಆಯೋಜಿಸಲಾಗುತ್ತಿದೆ.