Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಅಹಿಂದ ಚಳುವಳಿಯಡಿ ಕಾಂತರಾಜ್, ಜಯಪ್ರಕಾಶ್ ಹೆಗ್ಡೆ ಹಾಗೂ ಮಧುಸೂದನ್ ನಾಯಕ್ ವರದಿಗಳ ಜಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಅಹಿಂದ ಮುಖ್ಯ ಸಂಚಾಲಕ ಸಿರಾಜ್ ಬಜ್ಪೆ ಆಗ್ರಹ

ಮಂಗಳೂರು: ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಬಲಪಡಿಸುವ ಉದ್ದೇಶದಿಂದ ಅಹಿಂದ ಚಳುವಳಿಯ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದಿಡಲಾಗಿರುವ ವಿವಿಧ ಪ್ರಮುಖ ಬೇಡಿಕೆಗಳನ್ನು ಶೀಘ್ರವಾಗಿ ಜಾರಿಗೆ ತರಬೇಕು ಎಂದು ಅಹಿಂದ ಚಳುವಳಿಯ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಚಾಲಕ ಸಿರಾಜ್ ಆಗ್ರಹಿಸಿದ್ದಾರೆ.ಅವರು ಸೋಮವಾರದಂದು ನಗರದ  ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಚನೆಯಾದ ಕಾಂತರಾಜ್ ಅವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂತರ ಜಯಪ್ರಕಾಶ್ ಹೆಗಡೆ ಅವರ ಅಧ್ಯಕ್ಷತೆಯ ಆಯೋಗ ಹಾಗೂ  ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ವರದಿಗಳನ್ನು ಇನ್ನು ವಿಳಂಬ ಮಾಡದೆ ಸಾರ್ವಜನಿಕವಾಗಿ ಪ್ರಕಟಿಸಬೇಕು. 

ಈ ಸಮೀಕ್ಷಾ ವರದಿಗಳಲ್ಲಿ ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಹತ್ವದ ದತ್ತಾಂಶಗಳು ಲಭ್ಯವಾಗಿದ್ದು, ಅವುಗಳನ್ನು ಆಧರಿಸಿ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಗಲಿದೆ. ಆದ್ದರಿಂದ ವರದಿಗಳನ್ನು ಮುಚ್ಚಿಡದೆ, ಅವುಗಳನ್ನು ಪ್ರಕಟಿಸಿ, ಕಾನೂನುಬದ್ಧವಾಗಿ ಪರಿಶೀಲಿಸಿ ಅಗತ್ಯ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
 ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶಾದ್ಯಂತ ಜಾತಿಗಣತಿ ಹಾಗೂ ಜನಗಣತಿಯನ್ನು ಶೀಘ್ರವಾಗಿ ನಡೆಸಿ, ಅದರ ದತ್ತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂಬುದು ಅಹಿಂದ ಚಳವಳಿಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.

ದೇಶದ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ನಿಖರ ಮಾಹಿತಿ ಲಭ್ಯವಾದಾಗ ಮಾತ್ರ ಸರ್ಕಾರದ ಸಂಪನ್ಮೂಲಗಳು ಮತ್ತು ವಿವಿಧ ಸೌಲಭ್ಯಗಳನ್ನು ಅಗತ್ಯವಿರುವ ಸಮುದಾಯಗಳಿಗೆ ನ್ಯಾಯಯುತವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಜಾತಿಗಣತಿ ಮತ್ತು ಜನಗಣತಿ ಎರಡನ್ನೂ ದೇಶಾದ್ಯಂತ ಆದಷ್ಟು ಬೇಗ ಪೂರ್ಣಗೊಳಿಸಿ, ಅದರ ವರದಿಯನ್ನು ಆಧರಿಸಿ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ರಾಜಕೀಯ ವಿಳಂಬವಿಲ್ಲದೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಕಾಂತರಾಜ್ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಕೂಡಲೇ ಪ್ರಕಟಿಸಬೇಕು.ಜಯಪ್ರಕಾಶ್ ಹೆಗಡೆ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿಯನ್ನು ಪ್ರಕಟಿಸಿ ಅನುಷ್ಠಾನಗೊಳಿಸಬೇಕು.ರಾಜ್ಯದ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ವೈಜ್ಞಾನಿಕ ದತ್ತಾಂಶದ ಆಧಾರದ ಮೇಲೆ ಜಾರಿಗೊಳಿಸಬೇಕು.ದೇಶಾದ್ಯಂತ ಜಾತಿಗಣತಿ ಹಾಗೂ ಜನಗಣತಿಯನ್ನು ಶೀಘ್ರವಾಗಿ ನಡೆಸಬೇಕು. ಜಾತಿಗಣತಿ ಮತ್ತು ಜನಗಣತಿಯ ದತ್ತಾಂಶವನ್ನು ಆಧರಿಸಿ ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ನೀತಿಗಳನ್ನು ರೂಪಿಸಬೇಕು ಎಂಬುದು ಅಹಿಂದ ಚಳುವಳಿಯ ಪ್ರಮುಖ ಬೇಡಿಕೆಗಳಾಗಿವೆ ಎಂದರು.



ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಪೆರ್ಮುದೆ, ನಿಶಾಕ್ ಕರಾವಳಿ, ವಸಂತ್, ಮನೀಶ್, ಮೀನಾ ಟೆಲ್ಲಿಸ್‌ ಸೇರಿದಂತೆ ಅಹಿಂದ ಚಳುವಳಿಯ ಪ್ರಮುಖರು ಉಪಸ್ಥಿತರಿದ್ದರು.






ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಕೆ :

ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭ ಅಹಿಂದ ನಾಯಕರಾದ ದೀಪಕ್ ಪೆರ್ಮುದೆ ಮನೀಶ್ ಬೋಲಾರ್ ,ಮೀನಾ ಟೆಲಿಸ್, ವಸಂತ್, ನಿಸಾರ್ ಖರಾವಳಿ, ಅವಿತಾ ನೊರೋಣ, ಲಿಡಿಯಾ ಲೋಬೋ, ಮೇರಿ ಪಿಂಟೋ, ಸ್ಟಾನಿ ಪಿಂಟೋ, ಅನ್ವರ್ ರಜಾಕ್ ಎಸ್.ಎಂ,ವಿಲ್ಫ್ರೆಡ್, ಹಫೀಸ್ ಕೊಲಂಬೆ, ಫಯಾಜ್ ಹಾಮದ್ ಬಜ್ಪೆ ಹಾಗೂ ಅಡ್ವಕೇಟ್ ಹನೀಫ್, ರಾಕೇಶ್ ಕುಂದರ್ ,ಸುಜೀರ್ ,ವಿನಾಯಕ ,ನಿಶಿತ್ ,ಅವಿನಾಶ್ ಸೇರಿದಂತೆ ಅಹಿಂದ ಚಳುವಳಿಯ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.