ಎಂ. ದೇವದಾಸರ ಹೋರಾಟದ ಬದುಕು ಸಮಾಜಕ್ಕೆ ಸದಾ ಪ್ರೇರಣೆ – ಸಿರಾಜ್ ಬಜ್ಪೆ
ಬಜಪೆ:ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಇತ್ತೀಚೆಗೆ ನಿಧನರಾದ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಹಾಗೂ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾಗಿದ್ದ ಎಂ. ದೇವದಾಸರ ಅವರಿಗೆ ನುಡಿನಮನ ಕಾರ್ಯಕ್ರಮವು ಬಜ್ಪೆಯ ಜಾರಾ ಸೆಂಟರ್‌ನ ಮೊದಲನೇ ಮಹಡಿಯಲ್ಲಿ ಗೌರವಪೂರ್ವಕವಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ಎಂ. ದೇವದಾಸರವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜನಪರ ಹೋರಾಟಗಳಿಗೆ ಮುಡಿಪಾಗಿಟ್ಟಿದ್ದರು. ಅವರ ಆಚಾರ-ವಿಚಾರಗಳು, ಹೋರಾಟದ ಮನೋಭಾವ, ಚಳವಳಿಗಳು, ಆಂದೋಲನಗಳು ಹಾಗೂ ಪ್ರತಿಭಟನೆಗಳ ಮೂಲಕ ಸಮಾಜದ ಧ್ವನಿಯಾಗಿ ಅವರು ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಸಮಾಜದ ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ಯಾವುದೇ ರಾಜಿ ಇಲ್ಲದೆ ಹೋರಾಡಿದ ದೇವದಾಸರವರ ಜೀವನ ಮತ್ತು ಹೋರಾಟದ ಹೆಜ್ಜೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಬೆಳೆಸಿಕೊಂಡು ಬಂದ ಹೋರಾಟದ ಚಿಂತನೆಗಳು ಹಾಗೂ ಜನಪರ ಕಾರ್ಯಕ್ರಮಗಳು ಸದಾ ಜೀವಂತವಾಗಿರಲಿವೆ ಎಂದು ಸಿರಾಜ್ ಬಜ್ಪೆ ಹೇಳಿದರು.
ಹಿರಿಯ ದಲಿತ ಸಂಘರ್ಷ ಸಮಿತಿಯ ನಾಯಕ ಮಂಜಪ್ಪ ಪುತ್ರನ್ ಅವರು ಮಾತನಾಡಿ, ದೇವದಾಸರವರೊಂದಿಗೆ ಈ ಭಾಗದಲ್ಲಿ ನಡೆದ ಅನೇಕ ಸಾಮಾಜಿಕ ಹಾಗೂ ಜನಪರ ಹೋರಾಟಗಳನ್ನು ಸ್ಮರಿಸಿಕೊಂಡರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಲು ದೇವದಾಸರವರು ಸದಾ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.
ನಾಗರಿಕ ಹೋರಾಟ ಸಮಿತಿಯ ನಾಯಕ ಎಸ್‌ಡಿಪಿಐ ಮುಖಂಡ ಇಂಜಿನಿಯರ್ ಇಸ್ಮಾಯಿಲ್ ಅವರು ಮಾತನಾಡಿ, ಎಂ. ದೇವದಾಸರವರು ನಮ್ಮನ್ನು ಅಗಲಿದ್ದರೂ, ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರ ಹೋರಾಟದ ಕಾರ್ಯಕ್ರಮಗಳು ಮತ್ತು ವಿಚಾರಧಾರೆಗಳು ನಮ್ಮ ಮುಂದೆಯೇ ಇವೆ. ಅವರ ಹೋರಾಟದ ಪರಂಪರೆಯನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ನುಡಿನಮನ ಸಲ್ಲಿಸಿ, ಎಂ. ದೇವದಾಸರವರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ವಿಜಯ ಗೋಪಾಲ್ ಸುವರ್ಣ, ಮೋನಾಕ, ಸಲೀಂ ಭಾಜಿ, ಅಬ್ದುಲ್ ಖಾದರ್ ಜರಿ, ಅಬೂಬಕ್ಕರ್ ಜರಿ, ಬಿಎಸ್‌ಪಿ ಜಿಲ್ಲಾ ಮುಖಂಡರಾದ ರಾಕೇಶ್ ಕುಂದರ್, ಉದ್ಯಮಿ ಫಯಾಜ್ ಹಮ್ಮದ್, ಹಮೀದ್ ಜರಿ ,ಸಾಮಾಜಿಕ ಹೋರಾಟಗಾರರಾದ ಅಲ್ಬನ್, ಅಜರ್, ದಲಿತ ಸಂಘದ ನಾಯಕರಾದ ವಸಂತ್, ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ ಸೇರಿದಂತೆ ಹಲವು ಮುಖಂಡರು, ಹೋರಾಟಗಾರರು ಹಾಗೂ ಊರಿನ ಹಿರಿಯ ಗಣ್ಯರು ಉಪಸ್ಥಿತರಿದ್ದು, ದೇವದಾಸರವರಿಗೆ ಗೌರವಪೂರ್ವಕ ನುಡಿನಮನ ಸಲ್ಲಿಸಿದರು.
ನಿಸಾರ್ ಕರಾವಳಿ ಅವರು ಸ್ವಾಗತಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ನಾಗರಿಕರ ಉಪಸ್ಥಿತಿಯಿಂದ ನುಡಿನಮನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.