ನಾಟಿ ಕಾರ್ಯದ ಸಂದರ್ಭ ನಡೆಯುತ್ತೆ ದೈವದ ಕಲ್ಲಿಗೆ ವಿಶೇಷ ಪೂಜೆ
ಕಿನ್ನಿಗೋಳಿ:ಪಕ್ಷಿಕೆರೆಯಿಂದ ಸುರಗಿರಿ ದೇವಸ್ಥಾನದ ದಾರಿ ಮಧ್ಯೆ ಅರಸು ಕುಂಜಿರಾಯ ದೈವಸ್ಥಾನದ ಸಮೀಪ ಒಂದು ಎಕರೆಯಷ್ಟು ಇರುವ ಗದ್ದೆ ಅತ್ತೂರು ಹೊಸವಕ್ಲು ಮನೆಗೆ ಸಂಬಂಧ ಪಟ್ಟ ಗದ್ದೆಯಾಗಿದ್ದು, ಆ ವಿಶಾಲ ಗದ್ದೆಯ ನಡುವೆ ಎರಡು ಕಲ್ಲುಗಳಿವೆ ಅದು ಸಾಮಾನ್ಯ ಕಲ್ಲು ಅಲ್ಲ ದೈವದ ಕಲ್ಲು. ಅರಸು ಕುಂಜಿರಾಯರು ಐವೆರ್ ಸತ್ಯೋಲು ಮಾಯದ ಭೇಟಿಯಾಗುವಾಗ ಅವರ ಕೖಯಲ್ಲಿರುವ ಆಯುಧವನ್ನು ಹರಿತ ಮಾಡುತ್ತಿದ್ದ ಕಲ್ಲಂತೆ. ಆದಿಶೇಷ ಅಲ್ಲಿ ನೆಲೆ ನಿಂತಿದ್ದಾನೆ ಎಂಬ ನಂಬಿಕೆ ಇದೆಯಂತೆ. ಆ ಗದ್ದೆಗೆ ಅಮೆ ಸೂತಕದವರು, ಏಳು ತಿಂಗಳು ದಾಟಿದ ಗರ್ಭಿಣಿಯರು ಇಳಿಯುವಂತಿಲ್ಲ. ಕಾಂತೇರಿ ಜುಮಾದಿ ದರ್ಶನದಲ್ಲಿ ಆಜ್ಞೆ ನೀಡಿದ ಪ್ರಕಾರ ಕಾರ್ತಿ ಬೆಳೆ ತೆಗೆಯುವ ಸಂದರ್ಭ ಆ ಗದ್ದೆಗೆ ಬೀಜ ಬಿತ್ತಿ ಮೇಲೆ ಬರುವಾಗಲೂ ಅಥವಾ ನಾಟಿ ಮಾಡಿ ಮೇಲೆ ಬರುವಾಗ ಆ ಕಲ್ಲಿಗೆ ಅತ್ತೂರು ಪೊಸಕ್ಕೆಲ್ಲ್ ಕುಟುಂಬದವರು ಆ ಕಲ್ಲನ್ನು ನೀರಿನಿಂದ ಶುದ್ದಗೊಳಿಸಿ, ಹಾಲು ಸೀಯಾಳ ಎರೆದು ಹೂ ಗಂಧ ಹಚ್ಚಿ ಭಕ್ತಿಯಿಂದ ಕಾಂತೇರಿ ಜುಮಾದಿ ಪರಿವಾರ ಸತ್ಯವನ್ನು ಒಳ್ಳೆಯ ಫಲ ಬರುವಂತೆ ಪ್ರಾರ್ಥಿಸುತ್ತಾರೆ. ಭತ್ತ ಫಸಲು ಬಂದು ಕಟವು ಮಾಡುವಾಗಲೂ ಆ ಕಲ್ಲಿಗೆ ಕೈ ಮುಗಿದು ನಡೆದು ಕೊಳ್ಳುವ ಕ್ರಮ ಇದೆ. ಈ ಗದ್ದೆಯಲ್ಲಿ ಇಂದಿಗೂ ಎರಡು ಬೆಳೆ ತೆಗೆಯುತ್ತಾರೆ. ಈ ಸಲವೂ ಗದ್ದೆ ನಾಟಿಯಾದ ಮೇಲೆ ಶ್ರದ್ದಾ ಭಕ್ತಿಯಿಂದ ಆ ದೈವ ಕಲ್ಲಿಗೆ ಶ್ರಧ್ಧೆಯಿಂದ ಪೂಜೆ ನಡೆಯಿತು.