Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಕ್ಕಾರು:ಹೆದ್ದಾರಿಯಲ್ಲಿನ ಹೊಂಡಗಳನ್ನು ಮುಚ್ಚಿದ ರಿಕ್ಷಾ ಚಾಲಕರು ಹಾಗೂ ಮಾಲಕರು

ಬಜಪೆ:ಕಟೀಲು - ಬಜಪೆ ರಾಜ್ಯ ಹೆದ್ದಾರಿ 67 ರ ಎಕ್ಕಾರು ಬೂತಗುಂಡಿ ಎಂಬಲ್ಲಿ ಹೆದ್ದಾರಿಯಲ್ಲಿ ಹಲವು ದಿನಗಳಿಂದ ಉಂಟಾಗಿದ್ದ ಹೊಂಡಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಸುರಿದಂತಹ ಭಾರೀ ಮಳೆಗೆ ಹೊಂಡಗಳಲ್ಲಿ  ಮಳೆ ನೀರು ತುಂಬಿದ್ದರಿಂದ  ಅವುಗಳು ಕಾಣದೆ, ಕೆಲ ದ್ವಿಚಕ್ರ ವಾಹನ ಸವಾರರುಗಳು  ಅಪಘಾತಕ್ಕೀಡಾಗಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿತ್ತು.

ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟವರು   ಹೊಂಡಗಳನ್ನು ಮುಚ್ಚುವಂತೆ  ಸಾರ್ವಜನಿಕರು ಹಲವು ಬಾರಿ ಒತ್ತಾಯಿಸಿದ್ದರೂ, ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ  ಎಕ್ಕಾರಿನ ಕುಂಭಕಂಠಿಣಿ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಸದಸ್ಯರುಗಳು  ಸೇರಿ  ಸೋಮವಾರದಂದು ಸ್ವಯಂಪ್ರೇರಿತರಾಗಿ ತಾತ್ಕಾಲಿಕ ದುರಸ್ತಿಗೆ  ಮುಂದಾಗಿದ್ದಾರೆ. ತಮ್ಮ ಸ್ವಂತ ಶ್ರಮ ಹಾಗೂ  ಸಿಮೆಂಟ್ ,ಜಲ್ಲಿಗಳನ್ನು  ಬಳಸಿ ಹೊಂಡಗಳಿಗೆ ಕಾಂಕ್ರೀಟ್  ಹಾಕಿ ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ದುರಸ್ತಿ ಕಾರ್ಯದಲ್ಲಿ  ಎಕ್ಕಾರು ಕುಂಭಕಂಠಿಣಿ ಆಟೋ ಚಾಲಕರ ಹಾಗೂ ಮಾಲಕರ ಸಂಘದ ನಾಗೇಶ್ಅಮೀನ್,ಉದಯಶೆಟ್ಟಿ,ಹೇಮಂತ್  ಶೆಟ್ಟಿ,ಧರ್ಮೇಂದ್ರ,ಪ್ರಕಾಶ್ ಗೌಡ,ಪ್ರಕಾಶ್ ಬೆಲ್ಚಡ ಹಾಗೂ ಮತ್ತಿತರರು  ಪಾಲ್ಗೊಂಡರು.

ರಿಕ್ಷಾ ಚಾಲಕರು ಹಾಗೂ ಮಾಲಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರಸ್ತೆಗಳ ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಕ್ರಮ ಕೈಗೊಂಡು ಅಪಾಯಕಾರಿ ಹೊಂಡಗಳನ್ನು ಶಾಶ್ವತವಾಗಿ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.