ದ.ಸಂ.ಸ ಹಿರಿಯ ಮುಖಂಡ ದಿ. ಎಂ. ದೇವದಾಸ್ ರಿಗೆ "ನುಡಿನಮನ" ಕಾರ್ಯಕ್ರಮ
ಬಜಪೆ:ದ. ಕ. ಹಾಗೂ ಉಡುಪಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಪರಿಚಯಿಸಿದ ಹಿರಿಯ ಮುಖಂಡರೂ, ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರೂ ಆಗಿರುವ ದಿ. ಎಂ. ದೇವದಾಸ್ ರಿಗೆ "ನುಡಿನಮನ" ಕಾರ್ಯಕ್ರಮವು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಎಕ್ಕಾರು ಗ್ರಾಮ ಶಾಖೆಯ ವತಿಯಿಂದ ಆದಿತ್ಯವಾರದಂದು ಎಕ್ಕಾರು ಗ್ರಾಮ ಪಂಚಾಯತ್ ಗ್ರಂಥಾಲಯದ ಆವರಣದಲ್ಲಿ ನಡೆಯಿತು.
ದ. ಸಂ. ಸ. ಜಿಲ್ಲಾ ಸಂಘಟನಾ ಸಂಚಾಲಕ ರಘು. ಕೆ. ಎಕ್ಕಾರು ಅವರು ದೇವದಾಸ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಮಾತನಾಡಿ , ಶೋಷಿತರ ಧ್ವನಿಯಾದ ದ. ಸಂ. ಸ. ಸಂಘಟನೆಯನ್ನು1980 ರ ದಶಕದಲ್ಲಿ ಹಾಸನ ಜಿಲ್ಲೆಯ ಹಾಡ್ಯ ಸೋಮಶೇಖರ್ ರವರ ಜೊತೆಗೂಡಿ ದ. ಕ., ಉಡುಪಿ ಅವಳಿ ಜಿಲ್ಲೆಗಳ ಹಳ್ಳಿ ಹಳ್ಳಿಗಳಲ್ಲಿ ಪರಿಚಯಿಸಿ, ಸಮುದಾಯದ ಜನರನ್ನು ಸಂಘಟಿತಗೊಳಿಸುವಲ್ಲಿ ದೇವದಾಸ್ ರವರು ಮುಂಚೂಣಿ ನಾಯಕರಾಗಿದ್ದರು. ತಮ್ಮ ಸೈದ್ಧಾಂತಿಕ ಬದ್ಧತೆ, ಪ್ರಾಮಾಣಿಕತೆ, ಸರಳತೆಯೊಂದಿಗೆ ಎಲ್ಲರೊಂದಿಗೆ ನಗುಮುಖದಿಂದ ಬೆರೆಯುತ್ತಿದ್ದರು.ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ, ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟ, ಡಿ. ಸಿ. ಮನ್ನಾ ಭೂ ಹೋರಾಟ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟಗಳಲ್ಲಿ ಸದಾ ತೊಡಗಿಸಿಕೊಂಡಿದ್ದರು.ತನ್ನ ಅಪಾರ ಜ್ಞಾನ,ಅನುಭವದ ಮಾತುಗಳಿಂದ ಜನಪ್ರತಿನಿಧಿ ಗಳು,ಸರಕಾರಿ ಅಧಿಕಾರಿಗಳು ಕೂಡಾ ಇವರ ಮಾತುಗಳಿಗೆ ಮನ್ನಣೆ ನೀಡಿತ್ತಿದ್ದರು. ಅವರ ಸೈದ್ಧಾಂತಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಅವರ ಆಶಯದಂತೆ ನಾವೆಲ್ಲರೂ ಸಂಘಟನೆಯನ್ನು ಮುನ್ನಡೆಸಿಕೊಂಡು ಶೋಷಿತ ಸಮುದಾಯಗಳ ಪರ ನಿಂತಾಗ ಮಾತ್ರ ಅವರಿಗೆ ನಾವು ನಿಜವಾದ ಗೌರವ ನಮನವನ್ನು ಸಲ್ಲಿಸಿದಂತಾಗುತ್ತದೆ ಎಂದರು.
ದ. ಸಂ. ಸ. ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ. ಕೆ. ಎಕ್ಕಾರು, ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ ಮಾತನಾಡಿದರು. ಎಕ್ಕಾರು ಗ್ರಂಥಾಲಯದ ಗ್ರಂಥಪಾಲಕಿ ಶ್ರೀಮತಿ ಹೇಮಲತಾ ಶರ್ಮಾ, ಪರಮೇಶ್ವರ್ ಎಕ್ಕಾರು, ಸುದರ್ಶನ್ ಕೆಂಚಗುಡ್ಡೆ, ಮಂಜುನಾಥ್. ಟಿ., ಮೋಹನ್ ಕೆಂಚಗುಡ್ಡೆ, ರಘುನಾಥ್ ಕೆಂಚಗುಡ್ಡೆ, ಸುರೇಶ್ ಸೌಮ್ಯ, ರತ್ನಪ್ಪ ಕೆಂಚಗುಡ್ಡೆ, ನಾಗರಾಜ್, ವಸಂತ,ಸುಶೀಲ,ಶಾರದಾ,ಸಂಧ್ಯಾವಾಸು, ಯೋಗೀಶ್, ಯಾದವ ನೀರುಡೆ,ರಾಮಪ್ಪ ಮೇಲೆಕ್ಕಾರು, ಭುಜಂಗ ಮೇಲೆಕ್ಕಾರು ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಗ್ರಾಮ ಸಂಘಟನಾ ಸಂಚಾಲಕ ವಾಸು ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.