ಭಾರತೀಯ ಭಾಷೆಗಳ ಉಳಿವಿಗೆ ವಿದ್ಯಾರ್ಥಿಗಳ ಜವಾಬ್ದಾರಿ ಮುಖ್ಯವಾದುದು
ಬಜಪೆ :ಭಾರತ ಶಿಕ್ಷಣ ಸಚಿವಾಲಯ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ( ಡಿ ಎಸ್ ಇ ಅರ್ ಟಿ) ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಆಯೋಜಿಸಲಾದ ಭಾರತೀಯ ಭಾಷೆಗಳ ಬೇಸಿಗೆ ಶಿಬಿರ (ಬಿಬಿ ಎಸ್ ಸಿ)ದ ಅಂಗವಾಗಿ ಸಂಸ್ಥೆಯ ಸಾಹಿತ್ಯ ಸಂಘವು ಆಯೋಜಿಸಿದ ಭಾರತೀಯ ಭಾಷೆಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಜೇಶ್ವರಿ ಅವರು ನಾಮಫಲಕವು ಕೇವಲ ಒಂದು ಗುರುತಿನ ಚಿಹ್ನೆಯಲ್ಲ,ಅದು ವಿದ್ಯಾರ್ಥಿಗಳ ಕನಸುಗಳಿಗೆ ದಿಕ್ಕು ತೋರಿಸುವ ಪ್ರೇರಣೆಯ ಸಂಕೇತವಾಗಿದೆ. ಪ್ರತಿಯೊಂದು ತರಗತಿಯ ಹೆಸರು ಅದರ ವೈಶಿಷ್ಟ್ಯವನ್ನು ಬಿಂಬಿಸುವುದರೊಂದಿಗೆ, ಆ ಹೆಸರಿನ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ. ಅಕ್ಷರಗಳನ್ನು ಸೃಜನಾತ್ಮಕವಾಗಿ ಜೋಡಿಸಿ ಅರ್ಥಪೂರ್ಣ ಪದಗಳನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳ ಭಾಷಾ ಜ್ಞಾನವನ್ನು ವೃದ್ಧಿಸಬಹುದು, ಭಾರತೀಯ ಭಾಷೆಗಳನ್ನು ಉಳಿಸುವ ಜವಾಬ್ದಾರಿ ವಿಧ್ಯಾರ್ಥಿಗಳ ಮೇಲಿದೆ ಎಂದರು.
ಭಾರತೀಯ ಭಾಷಾ ಬೇಸಿಗೆ ಶಿಬಿರದ ಅಂಗವಾಗಿ ಸಂಸ್ಕೃತ, ಕನ್ನಡ, ಹಿಂದಿ ಹಾಗೂ ತುಳು ಭಾಷೆಗಳ ಪದಗಳನ್ನು ಬಳಸಿಕೊಂಡು ಶಾಲೆಯ ವಿವಿಧ ಕೊಠಡಿಗಳಿಗೆ ಅರ್ಥಪೂರ್ಣ ಹೆಸರುಗಳನ್ನು ನೀಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 34 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸೃಜನಾತ್ಮಕವಾಗಿ ಅಕ್ಷರಗಳನ್ನ ಜೋಡಿಸಿ ಕೊಠಡಿಗಳಿಗೆ ಅನ್ವರ್ಥವಾಗುವ ಹೆಸರುಗಳನ್ನು ಸೂಚಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಅಂತಿಮವಾಗಿ ಶಾಲೆಯ ಕೊಠಡಿಗಳಿಗೆ ಶಿಕ್ಷಕರ ಕೊಠಡಿ – ಅಭಿಜ್ಞಾಲಯ (ಜ್ಞಾನ, ಅನುಭವ ಮತ್ತು ಪ್ರಜ್ಞೆಯ ನೆಲೆ)
ಗ್ರಂಥಾಲಯ – ಜ್ಞಾನದಾತ್ರಿ (ಜ್ಞಾನವನ್ನು ಪೋಷಿಸುವ ತಾಯಿ)ಸಭಾಂಗಣ – ಪಾಂಚಜನ್ಯ (ಭಯವನ್ನು ದೂರ ಮಾಡಿ ಧೈರ್ಯ, ಜಾಗೃತಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಸಂಕೇತ)
ಮುಖ್ಯೋಪಾಧ್ಯಾಯರ ಕೊಠಡಿ – ಸುಮೇರು (ಶ್ರೇಷ್ಠತೆ, ಸ್ಥಿರತೆ ಮತ್ತು ನಾಯಕತ್ವದ ಸಂಕೇತ)
8ನೇ ತರಗತಿ (ಆಂಗ್ಲ ಮಾಧ್ಯಮ) – ಪ್ರಬೋಧ (ಜ್ಞಾನೋದಯ)
8ನೇ ತರಗತಿ (ಕನ್ನಡ ಮಾಧ್ಯಮ) – ಸುಬೋಧ (ಉತ್ತಮ ಅರಿವು)
9ನೇ ತರಗತಿ (ಆಂಗ್ಲ ಮಾಧ್ಯಮ) – ಪ್ರಮೇಧ (ಉನ್ನತ ಬುದ್ಧಿಶಕ್ತಿ)
9ನೇ ತರಗತಿ (ಕನ್ನಡ ಮಾಧ್ಯಮ) – ಸುಮೇಧ(ಉತ್ತಮ ಅರಿವು)
10ನೇ ತರಗತಿ (ಆಂಗ್ಲ ಮಾಧ್ಯಮ) – ಪ್ರಜ್ಞಾನ (ಪರಮ ಜ್ಞಾನ)
10ನೇ ತರಗತಿ (ಕನ್ನಡ ಮಾಧ್ಯಮ) – ಸುಜ್ಞಾನ (ಉತ್ತಮವಾದ ತಿಳುವಳಿಕೆ)
ವಿಜ್ಞಾನ ಪ್ರಯೋಗಾಲಯ – ಅನ್ವೇಷಿಕಾ (ಹೊಸ ವಿಚಾರಗಳ ಹುಡುಕಾಟ ಮತ್ತು ಸಂಶೋಧನೆ)
ಕ್ರೀಡಾ ಕೊಠಡಿ – ಶೌರ್ಯಧಾಮ (ಧೈರ್ಯ, ಶಿಸ್ತು ಮತ್ತು ವಿಜಯದ ನೆಲೆ)ಕಂಪ್ಯೂಟರ್ ಕೊಠಡಿ – ಸುಯುಕ್ತಿ(ಬುದ್ಧಿವಂತಿಕೆಯ ನಿರ್ಧಾರ) ಮೊದಲಾದ ಹೆಸರುಗಳನ್ನು ನಿಗದಿಪಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾ, ಕಿಂಜಲ್, ಧೃತಿ, ಮನ್ವಿತ, ರಕ್ಷಾ, ಶೃತಿ, ಸಮೃದ್ಧಿ, ಸಾನ್ವಿ ಬಿ.ಎಸ್., ಪಂಚಮ್, ಸಾನ್ವಿ, ತ್ರಿಶಾ, ಸುಧೀನ್ ರಾಜ್, ಸಿಯಾನ್, ತ್ರಿಶಾ, ಆದಿಶ್ ಹಾಗೂ ಅಕ್ಷಯ ಅವರು ಅತ್ಯುತ್ತಮ ಹೆಸರುಗಳನ್ನು ಸೂಚಿಸಿ ಬಹುಮಾನ ಪಡೆದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಆರ್ ಅಮೀನ್, ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರವೀಣ್ ಸಾಲಿಯನ್, ಇಂಟರೆಕ್ಟ್ ಡೈರೆಕ್ಟರ್ ರೊ. ಹೇರಿಕ್ ಪಾಯಸ್, ಜೋನಾಲ್ ಕಾರ್ಡಿನೇಟರ್ ರೊ. ತ್ಯಾಗರಾಜ್ ಆಚಾರ್ಯ, ಇಂಟರಾಕ್ಟ್ ಸಂಘದ ನೋಡಲ್ ಶ್ರೀಮತಿ ಜಯಂತಿ ಬಿ, ಇಂಟರ್ನೆಟ್ ಸಂಘದ ಅಧ್ಯಕ್ಷ ಕುಮಾರಿ ಅಪ್ಸಾನಾಬಾನು, ಉಪಸ್ಥಿತರಿದ್ದರು. ಶ್ರೀಮತಿ ವಿದ್ಯಾ ಗೌರಿ ಸಾಹಿತ್ಯ ಸಂಘದ ಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು ಕಿಂಜಲ್ ಸ್ವಾಗತಿಸಿದರು, ವಿದ್ಯಾ ವಂದಿಸಿದರು
ಕುಮಾರಿ ಸಾನ್ವಿ ಕಾರ್ಯಕ್ರಮ ನಿರೂಪಿಸಿದರು.