ವನಮಹೋತ್ಸವದ ಮೂಲಕ ಪರಿಸರ ಜಾಗೃತಿ ಮೂಡಿಸಿದ ವಿಜಯ ಯುವ ಸಂಗಮ
ಬಜಪೆ : ವಿಜಯ ಯುವ ಸಂಗಮವು ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಅರಣ್ಯ ಇಲಾಖೆ ಮಂಗಳೂರು ವಲಯದ ಗಸ್ತು ಪಾಲಕ ಅಧಿಕಾರಿ ಸಿದ್ದಣ್ಣ ದೊಡ್ಡಮನಿ ಹೇಳಿದರು.ಅವರು
ಜಿಲ್ಲಾ ರಾಜ್ಯೋತ್ಸವ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ವಿಜಯ ಯುವ ಸಂಗಮ (ರಿ.) ಎಕ್ಕಾರು ವತಿಯಿಂದ ಸಂಗಮದ ಪ್ರಾಂಗಣದಲ್ಲಿ ಭಾನುವಾರದಂದು ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಪರಿಸರ ಪೂರಕ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯ ಸಂಪೂರ್ಣ ಸಹಕಾರ ಮುಂದೆಯೂ ದೊರೆಯಲಿದೆ.ಯುನೆಸ್ಕೋ ಈ ವರ್ಷದ ಘೋಷವಾಕ್ಯ “Inspired by Nature, for Nature, for Our Future” ಅನ್ನು ಉಲ್ಲೇಖಿಸಿದ ಅವರು, ಪ್ರಕೃತಿಯಿಂದ ಪ್ರೇರಣೆ ಪಡೆದು ಪ್ರಕೃತಿಯ ಉಳಿವಿಗಾಗಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆ ಮತ್ತು ನಾಗರಿಕರು ಸಮಾನವಾಗಿ ಹೊತ್ತುಕೊಳ್ಳಬೇಕು ಎಂದರು.
ಸಿರಿ ಕುರಲ್ ರೈತ ಉತ್ಪಾದಕ ಸಂಘ ನಿಯಮಿತ, ಎಕ್ಕಾರು ಇದರ ಅಧ್ಯಕ್ಷ ಸದಾಶಿವ ಶೆಟ್ಟಿ ಮುರ ಎಕ್ಕಾರು ಮಾತನಾಡಿ, ಪರಿಸರ ಸಂರಕ್ಷಣೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಗಿಡ ನೆಡುವುದರೊಂದಿಗೆ ಅವುಗಳನ್ನು ಪೋಷಿಸಿ ಬೆಳೆಸುವ ಸಂಸ್ಕೃತಿಯನ್ನು ಬೆಳೆಸಿದಾಗ ಮಾತ್ರ ವನಮಹೋತ್ಸವದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಧನಂಜಯ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಅವರು ಸಂಘದ ಪರಿಸರ ಕಾಳಜಿಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೃಕ್ಷಾರೋಪಣೆ ನಡೆಸಿ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳಲಾಯಿತು.
ಈ ಸಂದರ್ಭ ಸಂಘದ ಸರ್ವಸದಸ್ಯರುಗಳು ಪಾಲ್ಗೊಂಡರು.
ಮನೀಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.