Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಳೆಯ ಅಭಾವ, ಆತಂಕದಲ್ಲಿ ಕೃಷಿಕರು

ಬಜಪೆ:ಮಳೆಯ ಅಭಾವದಿಂದ ಕರಾವಳಿ ಭಾಗದ ಕೃಷಿ ಗದ್ದೆಗಳು ನೀರಿಲ್ಲದೆ ಬಿರುಕು ಬಿಡಲು ಆರಂಭಿಸಿವೆ. ನಾಟಿ ಮಾಡಿದ ಭತ್ತದ ಸಸಿಗಳು ಸಮರ್ಪಕ ನೀರಿನ ಕೊರತೆಯಿಂದ ಒಣಗುವ ಹಂತ ತಲುಪಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.ಸಾಮಾನ್ಯವಾಗಿ ಈ ಅವಧಿಯಲ್ಲಿ ನೀರಿನಿಂದ ತುಂಬಿರಬೇಕಾದ ಗದ್ದೆಗಳು ಈಗ ಬಿರುಕು ಬಿಟ್ಟಿರುವುದು ಬರದಂತಹ ಪರಿಸ್ಥಿತಿಯನ್ನು ನೆನಪಿಸುತ್ತಿದೆ.ಜೂನ್ ಹಾಗೂ ಜುಲೈ ತಿಂಗಳಲ್ಲಿ ಧಾರಾಕಾರ ಮಳೆಗೆ ಹೆಸರಾಗಿರುವ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಳೆಯ ಕೊರತೆಯಿಂದ ಭತ್ತದ ನಾಟಿ ಕಾರ್ಯಗಳು ವಿಳಂಬವಾಗಿದ್ದು, ಈಗಾಗಲೇ ನಾಟಿ ಮಾಡಿದ ಗದ್ದೆಗಳಲ್ಲೂ ನೀರಿನ ಅಭಾವ ಕಂಡುಬರುತ್ತಿದೆ.

ಮಳೆಯನ್ನೇ ಅವಲಂಬಿಸಿರುವ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕೆರೆ, ಹಳ್ಳ ಹಾಗೂ ನೀರಿನ ಮೂಲಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಕಳವಳ ಉಂಟುಮಾಡಿದೆ.

ಸಮಯೋಚಿತ ಮಳೆ ಸುರಿಯದಿದ್ದರೆ ಈ ವರ್ಷದ ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು  ಕೃಷಿಕ ಮೋಹನ್ ಪೂಜಾರಿ ಕಬೆತ್ತಿಗುತ್ತು  ತೀವ್ರ  ಆತಂಕ ವ್ಯಕ್ತಪಡಿಸಿದ್ದಾರೆ.