Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹೊಂಡ ಗುಂಡಿಗಳಿಂದ ಹದಗೆಟ್ಟ ಪಂಜ-ಕೊಯಿಕುಡೆ ರಸ್ತೆ ದುರಸ್ತಿ: ಶ್ರೀ ವಿಠೋಭ ಭಜನಾ ಮಂದಿರದ ನೇತೃತ್ವದಲ್ಲಿ ಯಶಸ್ವಿ ಶ್ರಮದಾನ

ಕಿನ್ನಿಗೋಳಿ: ಕೊಯಿಕುಡೆ-ಪಂಜ ಶ್ರೀ ವಿಠೋಭ ಭಜನಾ ಮಂದಿರದ ಆಶ್ರಯದಲ್ಲಿ ಭಾನುವಾರದಂದು ಸಾರ್ವಜನಿಕ ರಸ್ತೆ ಸುಧಾರಣೆ ಹಾಗೂ ಪರಿಸರ ಸ್ವಚ್ಛತೆಯ ಶ್ರಮದಾನವು   ನಡೆಯಿತು. ಪಂಜ - ಕೊಯಿಕುಡೆ ರಸ್ತೆಯ ಕೆಂಪುಗುಡ್ಡೆಯಿಂದ ನಂದಿನಿ ನದಿಯ ಆಣೆಕಟ್ಟಿನ ತನಕ ಹೊಂಡ ಗುಂಡಿಗಳಿಂದ ಆವೃತ್ತವಾಗಿ ಜನರು  ಹಾಗೂ ವಾಹನಿಗರಿಗೆ  ಸಮಸ್ಯೆಯಾಗಿತ್ತು.  ಈ ಸಂಪರ್ಕ ರಸ್ತೆಯನ್ನು ಕೊಯಿಕುಡೆ-ಪಂಜ ಶ್ರೀ ವಿಠೋಭ ಭಜನಾ ಮಂದಿರದ ಆಶ್ರಯದಲ್ಲಿ ಕಾಂಕ್ರೀಟ್ ಮಿಶ್ರಣದ ಮೂಲಕ  ಹೊಂಡಗಳನ್ನು ಮುಚ್ಚುವ ಹಾಗೂ ರಸ್ತೆ ಬದಿಯ ಪೊದೆಗಳನ್ನು ಕಡಿದು ಸ್ವಚ್ಛಗೊಳಿಸುವ  ಕಾರ್ಯವನ್ನು ಸಾರ್ವಜನಿಕರು ಹಾಗೂ ಮಂದಿರದ ಪದಾಧಿಕಾರಿಗಳು ಒಗ್ಗೂಡಿ ಯಶಸ್ವಿಗೊಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಕೆಂಪುಗುಡ್ಡೆಯಿಂದ ನಂದಿನಿ ನದಿಯ ಆಣೆಕಟ್ಟಿನವರೆಗಿನ ರಸ್ತೆಯು ಸಂಪೂರ್ಣವಾಗಿ ಗುಂಡಿಬಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರ ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶ್ರೀ ವಿಠೋಭ ಭಜನಾ ಮಂದಿರದ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ಶ್ರಮದಾನವನ್ನು ಆಯೋಜಿಸಿದ್ದರು. 
ಭಾನುವಾರ ಮುಂಜಾನೆಯಿಂದಲೇ ಭಜನಾ ಮಂದಿರದ ಪದಾಧಿಕಾರಿಗಳ ನೇತೃತ್ವದಲ್ಲಿ ಕೈಯಲ್ಲಿ ಗುದ್ದಲಿ, ಪಿಕಾಸಿ, ಬುಟ್ಟಿಗಳನ್ನು ಹಿಡಿದು ರಸ್ತೆಗಿಳಿದು, ಕಾಂಕ್ರೀಟ್ ಮಿಶ್ರಣ ಮಾಡಿ ಗುಂಡಿಗಳನ್ನು ಮುಚ್ಚುವ ಮೂಲಕ ಸಂಚಾರ ಸುಗಮಗೊಳಿಸಲು ಶ್ರಮಿಸಿದರು.

ಒಗ್ಗಟ್ಟಿನ ಮಂತ್ರ ಜಪಿಸಿದ ಊರಿನ ನಾಗರಿಕರು!
ಯಾವುದೇ ಸರಕಾರಿ ಅನುದಾನಕ್ಕೆ ಕಾಯದೆ, "ನಮ್ಮ ಊರು ನಮ್ಮ ರಸ್ತೆ" ಎಂಬ ಉದ್ದೇಶದೊಂದಿಗೆ  ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಈ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದು ಯಶಸ್ಸಿಗೆ ಕಾರಣವಾಯಿತು. ರಸ್ತೆಯ ಗುಂಡಿಗಳನ್ನು ಮುಚ್ಚುವುದರ ಜೊತೆಗೆ, ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಕಾಡುಗಿಡಗಳನ್ನು ಕಡಿದು ಹಾಕಿ ಸುಂದರ ಹಾಗೂ ಸುರಕ್ಷಿತ ಸಂಚಾರಕ್ಕೆ ದಾರಿ ಮಾಡಿಕೊಡಲಾಯಿತು. ಗ್ರಾಮಸ್ಥರ ಈ ಅಪೂರ್ವ ಒಗ್ಗಟ್ಟು ಮತ್ತು ಗ್ರಾಮ ವಿಕಾಸದ ಪರಿಕಲ್ಪನೆ ಇಡೀ ಪರಿಸರಕ್ಕೆ ಮಾದರಿಯಾಗಿದೆ.
ಶ್ರಮದಾನದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ  ಶ್ರೀ ವಿಠೋಭ ಭಜನಾ ಮಂದಿರದ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು  ಶ್ರಮದಾನ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಊರಿನ ಸಮಸ್ತ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
 "ನಮ್ಮ ಕರೆಗೆ ಓಗೊಟ್ಟು ರವಿವಾರದ ರಜಾದಿನವನ್ನೂ ಲೆಕ್ಕಿಸದೆ ಬೆವರು ಹರಿಸಿ ಶ್ರಮಿಸಿದ ಊರಿನ ಎಲ್ಲಾ ಭಕ್ತಾದಿಗಳಿಗೆ, ನಾಗರಿಕರಿಗೆ ಹಾಗೂ ಈ ಕಾರ್ಯಕ್ಕೆ ಧನಸಹಾಯ ಮತ್ತು ವಸ್ತುರೂಪದಲ್ಲಿ ಸಹಕರಿಸಿದ ಎಲ್ಲಾ ಉದಾತ್ತ ಮಹನೀಯರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು. ಶ್ರಮದಾನ ಮತ್ತು ದಾನ ಧರ್ಮದ ಮೂಲಕ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ಆರಾಧ್ಯ ದೇವ ಶ್ರೀ ವಿಠೋಭ ದೇವರು ಆಯುಷ್ಯ, ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಿ ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ" ಎಂದು ಮಂದಿರದ ಪದಾಧಿಕಾರಿಗಳು ತಿಳಿಸಿದ್ದಾರೆ.