Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಕ್ಕಳಿಗೆ ತುಳು ಸಂಸ್ಕೃತಿ ಸಂಸ್ಕಾರ ಕಲಿಸಿ ಸಂಸ್ಕಾರ ಪೂರ್ಣ ವ್ಯಕ್ತಿಯಾಗಿ ಬೆಳೆಸಿ: ದಯಾನಂದ ಹೆಜ್ಮಾಡಿ


ಮೂಲ್ಕಿ:ಹಿಂದಿನ ಜ್ಞಾನಪೂರ್ಣ ಜೀವನ ಶೈಲಿ ಆಚಾರ ವಿಚಾರಗಳ ವೈಜ್ಞಾನಿಕ ಸತ್ಯ ಹೊಂದಿದ ತಿಳುವಳಿಕೆಗಳನ್ನು ಕೂಡು ಕುಟುಂಬದ ಉತ್ತಮ ಅನುಭವಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಂಸ್ಕಾರ ಪೂರ್ಣ ವ್ಯಕ್ತಿತ್ವ ಬೆಳೆಸಲು ಸಾಧ್ಯ ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಹೇಳಿದರು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ಇಪ್ಪತ್ತನಾಲ್ಕನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಲಾಂಟನ್ ದೀಪ ಉರಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಆಟಿಯ ಮದಿಪು ನೀಡಿದ ಉಗ್ಗೇಲ್ ಬೆಟ್ಟು ಬ್ರಹ್ಮ ಬೈದರ್ಕಳು ಮತ್ತು ಚಿಕ್ಕಮ್ಮದೇವಿ ಗರಡಿಯ ಮುಖ್ಯಸ್ಥ ದಯಾನಂದ ಕರ್ಕೇರ ಮಾತನಾಡಿ, ತುಳುನಾಡಿನ ಆಷಾಡ(ಆಟಿ) ಆಚರಣೆಗಳು ವಿಶೇಷವಾಗಿ ಆರೋಗ್ಯ ರಕ್ಷಣೆಗೆ ಪೂರಕವಾಗಿದ್ದು  ಕೃಷಿ ಬದುಕಿನಲ್ಲಿ ಕಂಡುಕೊಂಡ ತಿಳಿವಳಿಕೆಗಳನ್ನು ಆಚರಣೆಯ ಮೂಲಕ ನಡೆಸಿ ಬೆಳೆಸಿದ್ದಾರೆ ನಾವು ತಿಳಿದು ಮುಂದಿನ ಪೀಳಿಗೆಗೆ ಕಾಪಿಡುವ ಅಗತ್ಯತೆ ಇದೆ ಎಂದರು.
ಈ ಸಂದರ್ಭ ಆಟಿ ತಮ್ಮನವನ್ನು ಹಿರಿಯ ಸಮಾಜಸೇವಕ ವಾಸುಪೂಜಾರಿ ಚಿತ್ರಾಪು ರವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ವಹಿಸಿದ್ದರು. ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಮೂಲ್ಕಿ ರೋಟರಿ ಅಧ್ಯಕ್ಷೆ ಭಾನುವತಿ ಶೆಟ್ಟಿ ಕಕ್ವಗುತ್ತು, ಕಾರ್ಯಕ್ರಮ ಸಂಯೋಜಕಿ ಚಿತ್ರ ಸುರೇಶ್ ಜತ್ತನ್, ಕಾರ್ಯದರ್ಶಿ ವೇದಾವತಿ ಜಯ ಕುಮಾರ್, ಕೋಶಾಧಿಕಾರಿ ಭವಿಷ್ ಬಿ.ಸಾಲ್ಯಾನ್ ಉಪಸ್ಥಿತರಿದ್ದರು. ಶಿವಪ್ರಣಾಮ್ ತಂಡದ ಮಕ್ಕಳಿಂದ ವಿಶೇಷ ನೃತ್ಯ ಪ್ರದರ್ಶನ, ರಾಜೇಶ್ವರೀ ನಿತ್ಯಾನಂದ ರವರಿಂದ ಪ್ರಾರ್ಥನೆ, ಚರಿಷ್ಮಾ ಶ್ರೀನಿವಾಸ್ ರವರಿಂದ ಸ್ವಾಗತ, ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಜಯ ಕುಮಾರ್ ಕುಬೆವೂರುರವರಿಂದ ಪ್ರಸ್ತಾವನೆ,ಪ್ರಜ್ವಲ್ ಭಂಡಾರಿ ಕೌಡೂರು ರವರಿಂದ ಆಟಿದ ತೆಲಿಕೆ, ಯುವ ವಾಹಿನಿ ಕಲಾವಿದರಿಂದ ಆಟಿ ನಲಿಕೆ, ಅರೆಪುದಡ್ಡೆ, ಚಾ ಕಾಫಿ, ಹುರಿಕಡ್ಲೆ , ಹಪ್ಪಳ ನೀಡಲಾಯಿತು.
ನರೇಂದ್ರ ಕೆರೆಕಾಡು ಮತ್ತು ಮೋಹನ್ ಸುವರ್ಣ ನಿರೂಪಿಸಿದರು. ವೇದಾವತಿ ಜಯ ಕುಮಾರ್ ವಂದಿಸಿದರು. ಬಳಿಕ ಆಟಿ ಖಾಧ್ಯಗಳೊಂದಿಗೆ ಭೋಜನ ಕೂಟ ನಡೆಯಿತು. ಚಿತ್ರ:ಎಂಯುಎಲ್_ಜುಲೈ೨೬_೧ ಆಟಿ/ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ಇಪ್ಪತ್ತನಾಲ್ಕನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಲಾಂಟನ್ ದೀಪ ಉರಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು.