ಪಡುಪಣಂಬೂರು ಗ್ರಾಮ ಸಭೆಗೆ ಗ್ರಾಮಸ್ಥರ ಕೊರತೆ ,ಅಧಿಕಾರಿಗಳ ಗೈರು ಹಾಜರು- ತರಾಟೆ
ಸಭೆ ಶುರುವಾಗುತ್ತಲೇ ಗ್ರಾಮಸ್ಥರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಗ್ರಾಮ ಸಭೆಗೆ ಹಾಜರಾಗಿ ಗ್ರಾಮಸ್ಥರ ಸಮಸ್ಯೆಗೆ ಉತ್ತರಿಸಬೇಕಾದ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಇನ್ನೊಂದೆಡೆ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಕಾಣುತ್ತಿದೆ ,ಗ್ರಾಮ ಸಭೆ ಮುಂದೂಡಿದರೆ ಜನರ ತೆರಿಗೆ ಪೋಲಾಗುತ್ತದೆ, ಎಂದು ಹೇಳಿದರು
ಗ್ರಾಮ ಸಭೆಗೆ ಗೈರು ಹಾಜರಾದ ಪೊಲೀಸ್ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಸಹಿತ ಅನೇಕ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಯಿತು
ಆಗ ಗ್ರಾಮಸ್ಥ ವಿನೋದ್ ಮಾತನಾಡಿ ಗ್ರಾಮಸ್ಥರಿಗೆ ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಅಪಾಯದಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಿ
ಗ್ರಾಮಸ್ಥ ವಿನೋದ್ ಸಾಲ್ಯಾನ್ ಮಾತನಾಡಿ ಗ್ರಾಮ ಪಂಚಾಯತಿ ಹಿಂದುಗಡೆ ಹೈ ಟೆನ್ಶನ್ ಹಾಗೂ ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದ ಮಾಂಟ್ರಾಡಿ ಬಳಿ ಹಳೆ ವಿದ್ಯುತ್ ಕಂಬ ಅಪಾಯದಲ್ಲಿದ್ದು ತೆರವುಗೊಳಿಸಬೇಕು ಎಂದರು
ತೋಕೂರು ಅಂಗನವಾಡಿ ಬಳಿಯ ವಿದ್ಯುತ್ ಕಂಬದ ಗೈ ವಯರ್ ಸರಿಪಡಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಅಗ್ರಹಿಸಿದರು,
ಪಂಚಾಯತ್ ವ್ಯಾಪ್ತಿಯ ವಿದ್ಯುತ್ ಕಂಬಗಳಲ್ಲಿ ಮರದ ಬಳ್ಳಿಗಳು ಆವರಿಸಿದ್ದು ತೆರವುಗೊಳಿಸಬೇಕು ಹಾಗೂ ಪಂಚಾಯಿತಿಗೆ ದಾರಿದೀಪದ ಬಿಲ್ ಹೊರೆಯಾಗುತ್ತಿದ್ದು ಕಡಿಮೆಗೊಳಿಸಲು ಸರಕಾರಕ್ಕೆ ಮನವಿ ಮಾಡಬೇಕು,ತೋಕೂರು, ಹಾಗೂ ತಾಳಿಗುರಿ ಬಳಿ ಆಗಾಗ್ಗೆ ವಿದ್ಯುತ್ ಕಡಿತ ಹಾಗೂ ಸಮಸ್ಯೆ ಇದೆ ಎಂದು ಗ್ರಾಮಸ್ಥರು ದೂರಿದರು
ಗ್ರಾಮ ಪಂಚಾಯತಿ ವ್ಯಾಪ್ತಿಯ ಟಿ ಎ ಬೋರ್ಡ್ ಬಳಿ ಕುಡಿಯುವ ನೀರಿನ ಸಮಸ್ಯೆ ಇದ್ದು ಜೆಜೆ ಎಂ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು ಇದಕ್ಕೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಪ್ರಶಾಂತ್ ಆಳ್ವ ಉತ್ತರಿಸಿ. ಪರಿಶೀಲಿಸುವ ಬಗ್ಗೆ ಭರವಸೆ ನೀಡಿದರು
ಪಡುಪಣಂಬೂರು ಕಲ್ಲಾಪು ತೋಕೂರು ಎಸ್ ಕೋಡಿ ರಸ್ತೆ ದುರಸ್ತಿ ಬಗ್ಗೆ ಗ್ರಾಮಸ್ಥರಾದ ಕುಸುಮಾ ಚಂದ್ರಶೇಖರ್ ಮನವಿ ಮಾಡಿದರು. 10ನೇ ತೋಕೂರು ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಬಗ್ಗೆ ಗ್ರಾಮಸ್ಥ ಮೋಹನ್ ದಾಸ್ ಹೇಳಿದರು. ಫೆಬ್ರವರಿ ಯಿಂದ ಎಪ್ರಿಲ್ ವರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಉಪ್ಪು ನೀರಿನ ಸಮಸ್ಯೆ ಎಂದು ಗ್ರಾಮಸ್ಥರು ದೂರಿದರು.
ಕೆಮ್ರಾಲ್ ಆರೋಗ್ಯ ಕೇಂದ್ರದ ಕೋಮಲ ಮಾತನಾಡಿ ಮಳೆಗಾಲದಲ್ಲಿ ಮಲೇರಿಯಾ, ಡೆಂಘೀ ಮತ್ತಿತರ ಮಾರಕ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.ಗ್ರಾಮಸ್ಥ ವಿನೋದ್ ಮಾತನಾಡಿ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿ ಎಂದರು.
ಸಿಆರ್ ಪಿ ಜ್ಯೋತಿ ಖಾರ್ವಿ ಮಾತನಾಡಿ ಕನ್ನಡ ಶಾಲೆಯಲ್ಲಿ ಕನ್ನಡ ಜೊತೆಗೆ ಆಂಗ್ಲ ಮಾಧ್ಯಮ ಕಲಿಸಲಾಗುತ್ತಿದೆ ಎಂದರು
ಎಸ್ಕೋಡಿ ರಾಮಣ್ಣ ಶೆಟ್ಟಿ ಶಾಲೆಯ ಎದುರು ಭಾಗದ ಪಕ್ಷಿಕೆರೆ ಪ್ರಧಾನ ರಸ್ತೆಯಲ್ಲಿ ಶಾಲೆ ಬಿಡುವ ಹೊತ್ತಿನಲ್ಲಿ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಪೊಲೀಸರ ಅನುಮತಿ ಪಡೆದು ಬ್ಯಾರಿಕೇಡ್ ಅಳವಡಿಸುವ ಬಗ್ಗೆ ತೀರ್ಮಾನಿಸಲಾಯಿತು
ಪಂಚಾಯತ್ ವ್ಯಾಪ್ತಿಯ ರೈಲ್ವೇ ನಿಲ್ದಾಣ ರಸ್ತೆ, ಕೆರೆಕಾಡು, ಕೋಲ್ನಾಡು ಮೆಸ್ಕಾಂ ಬಳಿ ಎಲ್ಲೆಂದರಲ್ಲಿ ದುಷ್ಕರ್ಮಿಗಳು ತ್ಯಾಜ್ಯ ಬಿಸಾಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೆರೆಕಾಡು ಶಾಲೆಯಲ್ಲಿ ಕೆಲ ಪುಂಡು ಪೋಕರಿಗಳಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು
ಪಂಡುಪಣಂಬೂರು ಅರಮನೆ ರಸ್ತೆಯಿಂದ ಹೊಯ್ಗೆ ಗುಡ್ಡೆ ಕದಿಕೆ ಭಂಡಾರ ಮನೆ ಸಂಪರ್ಕ ರಸ್ತೆಗೆ ಶಾಸಕರ ನಿಧಿಯಿಂದ 2.80 ಲಕ್ಷ ಬಿಡುಗಡೆಯಾಗಿದ್ದು ಮಳೆಗಾಲ ಮುಗಿದ ಕೂಡಲೇ ದುರಸ್ತಿಪಡಿಸಲಾಗುವುದು ಎಂದು ವಿನೋದ್ ಸಾಲ್ಯಾನ್ ಸಭೆಯಲ್ಲಿ ತಿಳಿಸಿದರು ಉಳಿದಂತೆ ಬೆಳ್ಳಾಯರು ಬಳಿ ವಿಕಲಚೇತನರೊಬ್ಬರ ಮನೆಗೆ ಕಾಲು ಸಂಕ,ತೋಕೂರು ಕಂಬಳಬೆಟ್ಟು ಶ್ರೀ ನಾರಾಯಣ ಗುರು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ, ಕೆ ಆರ್ ಡಿ ಎಲ್ ರಸ್ತೆ ಕಾಮಗಾರಿ ಕಳಪೆ ಬಗ್ಗೆ ಗ್ರಾಮಸ್ಥರಿಂದ ದೂರು ಕೇಳಿ ಬಂತು
ನೋಡಲ್ ಅಧಿಕಾರಿಯಾಗಿ ಅರಣ್ಯ ಇಲಾಖೆಯ ಮನೀಶ್, ಪಂಚಾಯತ್ ಆಡಳಿತ ಅಧಿಕಾರಿ ರಾಮಕೃಷ್ಣ ಐತಾಳ, ಪಂಚಾಯತ್ ಪಿಡಿಒ ಸುಧೀರ್ ಮತ್ತಿತರರು ಉಪಸ್ಥಿತರಿದ್ದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.