ಮುಲ್ಕಿ- ಮೂಡಬಿದ್ರೆ ತಾಲೂಕು ವ್ಯಾಪ್ತಿಯ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ
ಮುಲ್ಕಿ: ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಮಳೆಗಾಲದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಅವರು ಮುಲ್ಕಿ ತಾಲೂಕು ಆಡಳಿತ ಪ್ರಜಾಸೌಧದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳು,ಮುಲ್ಕಿ ನಗರ ಪಂಚಾಯತ್ ಮೂಡಬಿದ್ರೆ ಪುರಸಭೆ ಹಾಗೂ ವ್ಯಾಪ್ತಿಯ ವಿವಿಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ಅವರು ಮಾತನಾಡಿ ಗ್ರಾಮದ ಸಮಸ್ಯೆಗಳನ್ನು ಆಯಾ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಮೇಲಧಿಕಾರಿಗಳಿಗೆ ತಿಳಿಸಿ ಅದರ ಬೆನ್ನು ಹಿಡಿದು ಕಾರ್ಯ ನಿರ್ವಹಿಸಬೇಕು,ಕುಡಿಯುವ ನೀರಿನ ಸಮಸ್ಯೆ,ಶಾಲೆಯ ಬಳಿ ಅಪಾಯಕಾರಿ ಮರ ತೆರವು ಕಾರ್ಯ ತುರ್ತಾಗಿ ನಡೆಯಬೇಕು ಇಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು ಭಾರೀ ಮಳೆ ಗಾಳಿಗೆ ಸಮುದ್ರ ಹಾಗೂ ನದಿ ತೀರದ ವಾಸಿಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ,ಅಪಾಯಕಾರಿ ಸ್ಥಿತಿಯಲ್ಲಿ ಮನೆಗಳು ಇದ್ದರೆ ತುರ್ತಾಗಿ ನೆರೆಪೀಡಿತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು
ಸಭೆಗೆ ಅಮೃತ್ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳು ಗೈರಾಗಿರುವುದಕ್ಕೆ ಗರಂ ಆದ ಶಾಸಕರು ಕ್ಷೇತ್ರ ವ್ಯಾಪ್ತಿಯಲ್ಲಿ ಅಮೃತ್ ಕುಡಿಯುವ ನೀರು. ಯೋಜನೆ ಕಾಮಗಾರಿಯಿಂದ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದ್ದು ಯಾವ ಅಧಿಕಾರಿಗಳು ಅಮೃತ್ ಯೋಜನೆ ಕಾಮಗಾರಿ ಪೂರ್ತಿಗೊಳಿಸದೆ ನಿರಪೇಕ್ಷಣಾ ಪತ್ರ ನೀಡಬೇಡಿ,ನೀಡಿದರೆ ನೀವೇ ಹೊಣೆಗಾರರು ಎಂದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾಲೂಕು ವ್ಯಾಪ್ತಿಯ ಪ್ರತಿ ಶಾಲೆಗೆ ತೆರಳಿ ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಹೇಳಿದರು
ಸಭೆಯಲ್ಲಿ ಬಪ್ಪನಾಡು ಸ್ವಾಗತ ಗೋಪುರ ಸ್ಥಳಾಂತರ ನಿಧಾನಗತಿಯ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂಬ ದೂರುಗಳು ಬಂದಿದೆ ಎಂದು ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ಹೇಳಿದರು ಅವರು ಮಾತನಾಡಿ ಮುಲ್ಕಿ ವಿಜಯಾ ಕಾಲೇಜು ಬಳಿಯ ಜೈನ ಬಸದಿ ಬಳಿ ಮಳೆಗೆ ಕುಸಿತವಾಗುವ ಎಚ್ಚರಿಕೆ ಬಂದಿದ್ದು ಅಲ್ಲಿ ತಡೆಗೋಡೆ ನಿರ್ಮಾಣವಾಗಬೇಕು ಎಂದರು.
ಪಂಚಮಹಲ್ ಸದಾಶಿವ ದೇವಸ್ಥಾನದ ಬಳಿ ರಾಜಕಾಲುವೆ ತಡೆಗೋಡೆ ಕುಸಿದ ಬಗ್ಗೆ ಮುಖ್ಯಾಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ ಶಾಸಕರು ಸ್ಥಳವನ್ನು ಪರಿಶೀಲಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು
ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಚನಕೆರೆ ಅಂಗನವಾಡಿ ಸೋರಿಕೆ,ಪಂಚಾಯತ್ ಎದುರು ಭಾಗದಲ್ಲಿ ಅಪಾಯಕಾರಿ ಮರ ತೆರವು, ಕೆ ಎಸ್ ರಾವ್ ನಗರ ಶಿವಗಿರಿ ಎಸ್ಟೇಟ್ ರಸ್ತೆ ದುರಸ್ತಿ ,ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದ ರಸ್ತೆ ಹೊಂಡ ಬಿದ್ದಿದೆ ಹಾಗೂ ಚರಂಡಿ ಅವ್ಯವಸ್ಥೆ ಆಗರವಾಗಿದೆ ಎಂದು ಪಂಚಾಯತ್ ಪಿಡಿಒ ಪೂರ್ಣಿಮಾ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂಬಳಬೆಟ್ಟು ಅಂಗನವಾಡಿ ಬಳಿ ಅಪಾಯಕಾರಿ ಮರ ತೆರವು,ಕಲ್ಲಾಪು - ಎಸ್ ಕೋಡಿ ರಸ್ತೆ ದುರಸ್ತಿ, ಬಗ್ಗೆ ಪಂಚಾಯತ್ ಪಿಡಿಓ ಸುದೀರ್ ಹೇಳಿದರು
ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಹಿತ ಸಿಬ್ಬಂದಿಗಳ ಕೊರತೆ ಬಗ್ಗೆ ಡಿ ಎಚ್ ಒ ತಿಮ್ಮಯ್ಯ ಪ್ರಸ್ತಾಪಿಸಿದರು
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಫ್ ಎಸ್ ಎಸ್ ಟಿ ಪಿ ಕಾಮಗಾರಿಗಳನ್ನು ಬೇಗ ಪೂರ್ತಿಗೊಳಿಸಿ ಎಂದು ಶಾಸಕರು ಮುಖ್ಯಾಧಿಕಾರಿ ಜಯ ಶಂಕರ್ ರವರಿಗೆ ಹೇಳಿದರು
ಮೂಡಬಿದ್ರೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ದೂರುಗಳು ಬಂದಿದ್ದು ಬಗೆಹರಿಸಲು ಶಾಸಕರು ಮೂಡಬಿದ್ರೆ ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ರವರಿಗೆ ಹೇಳಿದರು.
ಮೂಡಬಿದ್ರೆ ತಾಲೂಕು ವ್ಯಾಪ್ತಿಯ ಪುತ್ತಿಗೆ ಕಾಲುಸಂಕ ದುರಸ್ತಿ ಹೊಸ್ಮಾರು ಬಜಗೋಳಿ ಹೆದ್ದಾರಿ ಅಪಾಯಕಾರಿ ಮರ ತೆರವು,ಮೂಡಬಿದ್ರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚಿಲಿಂಬಿ ಬಳಿ ಸಮಸ್ಯೆ,ಬೆಳುವಾಯಿಯಲ್ಲಿ ಕುಡಿಯುವ ನೀರಿನ ಸಮಸ್ಯೆ,ಕೊಳವೆ ಬಾವಿ ನಿರ್ಮಾಣಕ್ಕೆ ಬೇಡಿಕೆ,ಹೊಸಬೆಟ್ಟು ಗ್ರಾಮದ ದರೆಗುಡ್ಡೆ ಬಳಿ ಕಾಲುಸಂಕದ ದುರಸ್ತಿ, ಪುಚ್ಚಮೊಗರು ಓವರ್ ಹೆಡ್ ಟ್ಯಾಂಕ್ ದುರಸ್ತಿ ಮತ್ತಿತರ ಸಮಸ್ಯೆಗ ಬಗ್ಗೆ ತುರ್ತಾಗಿ ಕಾಮಗಾರಿ ನಡೆಸಲು ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು
ಸಭೆಯಲ್ಲಿ ಮುಲ್ಕಿ ತಹಶೀಲ್ದಾರ್ ಪೃಥ್ವೀ ಸಾನಿಕಂ,ಮೂಡಬಿದ್ರೆ ತಹಶೀಲ್ದಾರ್ ಶ್ರೀಧರ ಮುಂದಲಮನಿ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗಳಾದ ಗುರುದತ್,ಮಹೇಶ್ ಕುಮಾರ್ ಹೊಳ್ಳ, ಮುಲ್ಕಿ ತಾಲೂಕು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.