ಬಪ್ಪನಾಡು:ಕೃತಕ ನೆರೆ,ಸಾರ್ವಜನಿಕರಿಗೆ ತೊಂದರೆ
ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸ್ವಾಗತ ಗೋಪುರದ ಸ್ಥಳಾಂತರ ಕಾಮಗಾರಿಯು ನಡೆಯುತ್ತಿದ್ದು, ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಸ್ವಾಗತ ಗೋಪುರದ ಇಕ್ಕೆಲಗಳಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಗಳಲ್ಲಿ ಮಳೆ ನೀರು ತುಂಬಿ ಕೃತಕ ನೆರೆ ಉಂಟಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಹಾಗೂ ನಡೆದುಕೊಂಡು ಹೋಗುವವರಿಗೆ ತೀವ್ರ ತೊಂದರೆ ಉಂಟಾಯಿತು.
ಈ ನಡುವೆ ಬಪ್ಪನಾಡು ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ರಾಜ ಕಾಲುವೆಯಿಂದ ನೀರು ಸೋರಿಕೆಯಾಗಿ ದೇವಸ್ಥಾನದ ಎದುರು ಭಾಗದ ಕೃಷಿ ಭೂಮಿಗೆ ನೆರೆ ನೀರು ನುಗ್ಗಿ ಕೃಷಿ ಹಾನಿ ಕೂಡ ಸಂಭವಿಸಿದೆ ಎಂದು ಸ್ಥಳೀಯ ಕೃಷಿಕರು ಅಲವತ್ತುಗೊಂಡಿದ್ದಾರೆ.
ರಾಜ ಕಾಲುವೆಯಲ್ಲಿ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಗೇರುಕಟ್ಟೆ, ಪರಿಸರದ ನೀರು ಬಾರಿ ಗಾತ್ರದಲ್ಲಿ ಬರುತ್ತಿದ್ದು ಬಪ್ಪನಾಡು ಬಳಿ ಸರಿ ಪಡಿಸಬೇಕಾದ ಆಗತ್ಯವಿದೆ . ಈ ಬಗ್ಗೆ ಅನೇಕ ಬಾರಿ ಮುಖ್ಯ ನಗರ ಪಂಚಾಯಿತಿಗೆ ಮನವಿ ಮಾಡಿದರೂ ಇದುವರೆಗೂ ಸರಿಪಡಿಸಿಲ್ಲ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ
ಆದರೆ ಗುರುವಾರ ರಾತ್ರಿ ಸುರಿದ ಬಾರಿ ಮಳೆ ಪರಿಸರದ ಕೃಷಿಕರನ್ನು ಹಾಗೂ ಭಕ್ತಾದಿಗಳನ್ನು ಕಂಗೆಡಿಸಿದೆ.ದೇವಸ್ಥಾನದ ಗೋಪುರದ ಸ್ಥಳಾಂತರಿಸುವ ಕಾರ್ಯವು ನಿಧಾನಗತಿಯಲ್ಲಿ ಸಾಗುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು,ಕಾಮಗಾರಿಯು ಶೀಘ್ರವೇ ಮುಗಿಯಬೇಕಿದೆ ಹಾಗೂ ಈ ಭಾಗದ ಕೃಷಿಕರಿಗೆ ಅನುಕೂಲವಾಗುವಂತೆ ರಾಜ ಕಾಲುವೆಯನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಒತ್ತಾಯಿಸಿದ್ದಾರೆ.