ಅವ್ಯವಸ್ಥೆಯ ಆಗರವಾದ ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿ -ಪ್ರತಿಭಟನೆ
ಮುಲ್ಕಿ: ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿದೆ
ಪ್ರತೀ ಮಳೆಗಾಲದಲ್ಲಿ ರಾಜ್ಯ ಹೆದ್ದಾರಿಗೆ ಸೂಕ್ತ ಚರಂಡಿ ಕಲ್ಪಿಸದೆ ಹೆದ್ದಾರಿಯಲ್ಲಿ ನೀರು ಹರಿದು ಹೆದ್ದಾರಿ ಹೊಂಡಮಯವಾಗಿದೆ.
ಮುಲ್ಕಿ ವಿಜಯ ಸನ್ನಿಧಿ ಬಳಿಯಿಂದ ಶುರುವಾಗುವ ಹೆದ್ದಾರಿ ಅವ್ಯವಸ್ಥೆಯಿಂದ ಕಿನ್ನಿಗೋಳಿ ಮೂರು ಕಾವೇರಿವರೆಗೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ
ಮುಲ್ಕಿ ಪೇಟೆ,ಕಾರ್ನಾಡ್ ಗಾಂಧಿ ಮೈದಾನ, ಗೇರುಕಟ್ಟೆ, ಕುಬೆವೂರು ರೈಲ್ವೇ ಮೇಲ್ಸೇತುವೆ,ಕೆಂಚನಕೆರೆ,ಕೆರೆಕಾಡು, ಎಸ್ ಕೋಡಿ,ಹೊಸ ಕಾವೇರಿ,ಪದ್ಮನೂರು,ಕಿನ್ನಿಗೋಳಿ ,ಮೂರು ಕಾವೇರಿ ಬಳಿ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ನಿರ್ಮಿಸದೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ
ಈ ನಡುವೆ ರಾಜ್ಯ ಹೆದ್ದಾರಿ ಬದಿಯಲ್ಲಿ ಅಮೃತ್ 2.0 ಕುಡಿಯುವ ನೀರಿನ ಪೈಪ್ ಅಳವಡಿಕೆಯಿಂದ ಹೆದ್ದಾರಿ ಮತ್ತಷ್ಟು ಅದೋಗತಿಗೆ ಇಳಿದಿದ್ದು ಅಲ್ಲಲ್ಲಿ ಕುಸಿತ ಉಂಟಾಗಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿ ಅನೇಕ ಅಪಘಾತಗಳು ಸಂಭವಿಸಿದೆ . ರಾಜ್ಯ ಹೆದ್ದಾರಿಯ ಕುಬೆವೂರು ಅಪಾಯಕಾರಿ ತಿರುವು ಬಳಿ ಕುಡಿಯುವ ನೀರಿನ ಪೈಪ್ ಎರ್ರಾ ಬಿರ್ರಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಕುಸಿತ ಉಂಟಾಗಿದ್ದು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ
ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಅಲ್ಲಲ್ಲಿ ರಸ್ತೆಗಳನ್ನು ತುಂಡರಿಸಿದ್ದು ದ್ವಿ ಚಕ್ರ ವಾಹನಿಗರಿಗೆ ಸಂಚಾರ ಸಿಂಹ ಸ್ವಪ್ನವಾಗಿ ಪರಿಣಮಿಸಿದೆ
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಾಪತ್ತೆ ಹುಡುಕಿಕೊಡಿ!!
ರಾಜ್ಯ ಹೆದ್ದಾರಿ ಆವ್ಯವಸ್ಥೆ ಬಗ್ಗೆ ಮುಲ್ಕಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹೆದ್ದಾರಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರೂ ಅಧಿಕಾರಿಗಳ ಉದಾಸೀನ ಪ್ರವೃತ್ತಿಯಿಂದ ಹೆದ್ದಾರಿ ನಾಶವಾಗುತ್ತಿದೆ ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ
ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗಿದ್ದು ಲೋಕೋಪಯೋಗಿ ಇಲಾಖೆಯ ಡೋಂಟ್ ಕೇರ್ ಪ್ರವೃತ್ತಿಯಿಂದ ಜನರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ವಿಶ್ವಾಸ ಹೊರಟುಹೋಗಿದೆ. ಇನ್ನೊಂದೆಡೆ ಅಮೃತ್ ಕುಡಿಯುವ ನೀರಿನ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ಜನರ ನಿದ್ದೆಗೆಡಿಸಿದೆ. ಜನರ ಕೋಟಿ ಕೋಟಿ ತೆರಿಗೆ ಹಣವನ್ನು ಪೈಪ್ ಲೈನ್ ಕಾಮಗಾರಿಗೆ ಹಾಕಿ ಇದ್ದ ರಸ್ತೆಯನ್ನು ಹಾಳು ಮಾಡಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದ್ದಾರೆ. ಕಳೆದ ಬಾರಿ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 18 ಕೋಟಿ ವೆಚ್ಚದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದು ಹಾಕಿ ಸತ್ಯಾ ನಾಶ ಮಾಡಿದ ಅಧಿಕಾರಿಗಳು ಇದೀಗ ಮತ್ತೆ ಅಮೃತ್ ಕುಡಿಯುವ ನೀರಿನ ಯೋಜನೆಯ ಮುಖಾಂತರ ಹಣ ಮಾಡುವ ದಂದೆಗೆ ಇಳಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕುಡಿಯುವ ನೀರಿನ ಯೋಜನೆಗೆ ಅಲ್ಲಲ್ಲಿ ಅಗೆದು ಹಾಕಿದ ರಸ್ತೆ ಹಾಗೂ ಮುಲ್ಕಿ ಕಿನ್ನಿಗೋಳಿ ಹೆದ್ದಾರಿಗೆ ಸೂಕ್ತ ಚರಂಡಿ ನಿರ್ಮಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.