Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿಯಲ್ಲಿ ಮಾವು ಹಲಸು ಹಣ್ಣುಗಳ ಮೇಳ


ಕಿನ್ನಿಗೋಳಿ : ರಾಮನಗರ ಜಿಲ್ಲೆಯಿಂದ ತರಲಾದ ಕೆಂಪು ಬಣ್ಣದ ಚಂದ್ರ ಹಲಸು, ಹಲಸಿ ಬಣ್ಣದ ಹಲಸು, ತೋತಾಪುರಿ, ಮುಂಡಪ್ಪ, ಸಕ್ಕರೆ ಮಾವು, ಕಾಟು ಮಾವು, ಮಲ್ಲಿಕಾ ಹೀಗೆ ನಾನಾ ಜಾತಿಯ ಮಾವುಗಳು, ನೇರಳೆ ಹಣ್ಣು, ಎಡಪದವಿನ ಕೃಷಿಕರು ಬೆಳೆಸಿದ ಡ್ರಾಗನ್ ಫ್ರುಟ್, ಹೀಗೆ ನಾನಾ ರತಹದ ಹಣ್ಣುಗಳು, ಹಲಸಿನ ಜ್ಯೂಸು, ಐಸ್ ಕ್ರೀಂ, ಐಸ್ ಕ್ಯಾಂಡಿ, ಹಲಸು, ಮಾವು, ಅನಾನಸಿನ ಹೋಳಿಗೆ, ಜಿಲೇಬಿ, ಹಲಸಿನ ಗಾರಿಗೆ, ಗಟ್ಟಿ, ಹಲ್ವಾ, ಕಬಾಬ್ ಹೀಗೆ ನಾನಾ ತರಹದ ತಿಂಡಿ ವೈವಿಧ್ಯಗಳ ಸವಿಯನ್ನು ಭಾನುವಾರ ಕಿನ್ನಿಗೋಳಿಯ ಅಣ್ಣಯ್ಯಾಚಾರ‍್ಯ ಸಭಾಭವನದಲ್ಲಿ ನಡೆದ ನಾಲ್ಕನೆಯ ವರ್ಷದ ಮಾವು, ಹಲಸು, ಹಣ್ಣುಗಳ ಮೇಳಕ್ಕೆ ಬಂದ ಸಾವಿರಾರು ಮಂದಿ ತಿಂದು ಆನಂದಿಸಿದರು. ಪಾರ್ಸೆಲ್ ಮಾಡಿಕೊಂಡು ಮನೆಗೂ ಕೊಂಡೊಯ್ದರು.
ಮೇಳವನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಪ್ರಕಾಶ್ ಆಚಾರ್, ಪ್ರಣೀಕ್, ಪ್ರಥ್ವಿರಾಜ್ ಆಚಾರ‍್ಯ, ಅನಿತಾ ಆಚಾರ್ಯ, ಜಗದೀಶ್ ಆಚಾರ್, ಸ್ವರಾಜ್ ಶೆಟ್ಟಿ, ಸುಧಾಕರ ಆಚಾರ್, ಗೀತಾ ಯೋಗಿಶ್, ಪ್ರಭಾಕರ್, ಕಿಶೋರ್ ಶೆಟ್ಟಿ ಮುಂತಾದವರಿದ್ದರು.
ಸ್ಥಳೀಯ ಉತ್ಪನ್ನಗಳಾದ ಜೇನು, ಅದರ ಉಪ ಉತ್ಪನ್ನಗಳು, ತೆಂಗಿನ ಕೊಂಬಿನಿಂದ ತೆಗೆಯಲಾಗುವ ಕಲ್ಪರಸ, ಹಲಸಿನ ಹಪ್ಪಳ ಸೆಂಡಿಗೆ, ನಾನಾ ನಮೂನೆಯ ಉಪ್ಪಿನಕಾಯಿಗಳು, ಸಾಂಬಾರ ಪದಾರ್ಥಗಳು, ತರಕಾರಿ ಗಿಡಗಳು, ಹಣ್ಣು, ಹೂವುಗಳ ಗಿಡಗಳು, ವೈವಿಧ್ಯಮಯ ಚರ್ಮುರಿ ಹೀಗೆ ಸ್ವಾವಲಂಬಿ ಸಂತೆ, ಆಹಾರ ಮೇಳವನ್ನು ಕಂಡ ಅನುಭವ ಕಿನ್ನಿಗೋಳಿ ಪರಿಸರದ ಮಂದಿಗಾಯಿತು. ಹಲಸು, ಗಿಡಗಳನ್ನು, ತರಕಾರಿ ಬೀಜ ಹೀಗೆ ಜನ ಖರೀದಿಸಿ ಸಂಭ್ರಮದಿಂದ ಮನೆಗೊಯ್ದರು.