ಯಕ್ಷದ್ರುವ ಪಟ್ಲ ಪೌಂಡೇಶನ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆಯಲ್ಲಿ ಯಕ್ಷ ಶಿಕ್ಷಣ ಉದ್ಘಾಟನೆ
ಕಿನ್ನಿಗೋಳಿ :ಪಾಠದ ಜೊತೆಗೆ ಇತರ ಪಾಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಯಕ್ಷದ್ರುವ ಪಟ್ಲ ಪೌಂಡೇಶನ್ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆಯಲ್ಲಿ ಯಕ್ಷ ಶಿಕ್ಷಣವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷ ಶಿಕ್ಷಣದ ಬಗ್ಗೆ ಪಟ್ಲ ಫೌಂಡೇಶನ್ ಉತ್ತಮ ಅವಕಾಶವನ್ನು ಒದಗಿಸುತ್ತಿದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಯಕ್ಷಶಿಕ್ಷಣಕ್ಕೆ ಪ್ರತೀ ವರ್ಷ ಪಟ್ಲ ಫೌಂಡೇಶನಿಂದ ಸುಮಾರು ೮೦ ಲಕ್ಷ ಖರ್ಚು ಮಾಡಲಾಗುತ್ತಿದೆ.ಪ್ರತ್ಯೇಕ ಪಾಠ ಕ್ರಮವನ್ನು ಪುಸ್ತಕ ರೂಪದಲ್ಲಿ ನೀಡಲಾಗುತ್ತಿದೆ. ಪ್ರತಿಯೊಂದು ಪಾಠದ ಕೊನೆಗೆ ಸ್ಕ್ಯಾನಿಂಗ್ ಕೋಡ್ ನೀಡಲಾಗಿದ್ದು ಇದನ್ನು ಸ್ಕ್ಯಾನ್ ಮಾಡುವಾಗ ಅದಕ್ಕೆ ಸಂಬಂಧಿಸಿದ ವಿಡಿಯೋ ಬರುತ್ತದೆ, ಮುಂದಿನ ವರ್ಷ ಮಂಗಳೂರು ವಿಶ್ವವಿದ್ಯಾನಿಲಯದಿಂದ ಯಕ್ಷಗಾನದ ಬಗ್ಗೆ ಪರೀಕ್ಷೆ ನಡೆಯಲಿದ್ದು ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಸದಸ್ಯ ಚಂದ್ರ ರಾಣ್ಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷ ಶಿಕ್ಷಣ ಸಮಿತಿಯ ಸಂಚಾಲಕ ವಾಸುದೇವ ಐತಾಳ್, ಪಟ್ಲ ಫೌಡೇಶನ್ ನ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ, ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಮಾಜ ಕಲ್ಯಾಣಾ ಇಲಾಖೆಯ ಉಪನಿರ್ದೇಶಕಿ ಹೇಮಲತಾ, ಯಕ್ಷಗುರು ವರುಣ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪುಟ್ಟಸ್ವಾಮಿ ಸ್ವಾಗತಿಸಿ, ವಿದ್ಯಾ ಉಡುಪ ಧಾನ್ಯವಾದ ಸಮರ್ಪಿಸಿದರು.