ಮಕ್ಕಳಿಗೆ ಪುಸ್ತಕ ಕೊಡಿ - ರತ್ನಾಕರ ಕುಳಾಯಿ,ಕಿನ್ನಿಗೋಳಿಯಲ್ಲಿ ಸಾಹಿತ್ಯ ಸಂವಾದ
ಕಿನ್ನಿಗೋಳಿ : ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪುಸ್ತಕಗಳನ್ನು ಕೊಡಿ. ಓದುವಿಕೆ ಅವರಲ್ಲಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಸಾಹಿತ್ಯ ಪರಿಚಾರಕ ರತ್ನಾಕರ ಕುಳಾಯಿ ಹೇಳಿದರು.
ಅವರು ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಿನ್ನಿಗೋಳಿಯ ಸಂತೋಷ ಉಡುಪರ ಮನೆ ಗುರುಧಾಮದಲ್ಲಿ ಆಯೋಜಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕಗಳಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ಕಂಡಾಗ ಮಕ್ಕಳು ಪಡುವ ಆನಂದವನ್ನು ಗಮನಿಸಬೇಕು. ಹೀಗೆ ಓದುವ ಆಸಕ್ತಿಯನ್ನು ಪ್ರೇರೇಪಿಸಿ. ವಿದೇಶೀ ಪುಸ್ತಕಗಳೂ ಬಂದಿವೆ. ಫ್ಯಾಷನ್‌ಗಾಗಿಯೂ ಪುಸ್ತಕ ಕೊಳ್ಳುವವರೂ ಇದ್ದಾರೆ. ಅಧ್ಯಯನಕ್ಕಾಗಿ ಕೊಳ್ಳುವವರೂ ಇದ್ದಾರೆ. ಓದಿನ ಸಂತೋಷದ ಅನುಭವಕ್ಕಾಗಿ ಪುಸ್ತಕಗಳನ್ನು ಕೊಳ್ಳುವ ಹವ್ಯಾಸ ಇರಲಿ ಎಂದು ರತ್ನಾಕರ್ ಹೇಳಿದರು.
ಮನೆಮನೆಗಳಲ್ಲಿ ಗ್ರಂಥಾಲಯಕ್ಕೆ ಚಾಲನೆ
ಮೂಲ್ಕಿ ಕಸಾಪ ತಾಲೂಕು ಘಟಕ, ಅನಂತ ಪ್ರಕಾಶದ ಸಚ್ಚಿದಾನಂದ ಉಡುಪರ ಸಹಯೋಗದಲ್ಲಿ ಮೂಲ್ಕಿ ತಾಲೂಕಿನ ಇನ್ನೂರೈವತ್ತಕ್ಕೂ ಹೆಚ್ಚು ಮನೆಗಳಲ್ಲಿ ಮನೆ ಗ್ರಂಥಾಲಯ ಸ್ಥಾಪನೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಚಾಲನೆ ನೀಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ತಾನು ಆರು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಬಿಡುಗಡೆಗೊಳಿಸಿದ್ದೇನೆ. ಆಸಕ್ತ ಶಾಲೆಗಳಿಗೆ ನೂರು ಕೃತಿಗಳನ್ನು ನೀಡಿದ್ದು, ಮೂಲ್ಕಿ ತಾಲೂಕಿನಲ್ಲಿ ಆಗಲಿರುವ ಮನೆಗ್ರಂಥಾಲಯ ಯೋಜನೆಗೆ ಪುಸ್ತಕಗಳನ್ನು ನೀಡುವುದಾಗಿ ತಿಳಿಸಿದರು.
ಕಳೆದ ೨೫ ವರುಷಗಳಿಂದ ಸರಕಾರ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿಲ್ಲ. ಪರಿಣಾಮ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮಕ್ಕಳಿಗೆ ಕನ್ನಡ ಓದಲು ಪ್ರೇರೇಪಣೆ ನೀಡುವುದು ಹೇಗೆ? ಕನ್ನಡ ಸಾಹಿತಿಗಳನ್ನು ಪುಸ್ತಕಗಳನ್ನು ಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ಪುನರೂರು ಹೇಳಿದರು.
ಊರಿಗೆ ಕೀರ್ತಿ ತಂದ ಮಹಾಸಾಧಕ ಕೊ.ಅ.ಉಡುಪ
ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಭಾಷಾ ಪಂಡಿತರಾಗಿ, ಅನೇಕ ಶಿಷ್ಯರನ್ನು ಬೆಳೆಸಿದ, ಸಾಹಿತ್ಯ ಸಾಧಕ ಕೊ.ಅ. ಉಡುಪರು ಕಿನ್ನಿಗೋಳಿಯ ಜನತೆಗೆ ಕಾರಂತ, ಕಯ್ಯಾರ, ಅಚ್ಯುತದಾಸ, ಗೋವಿಂದಾಚಾರ್ಯರಂತಹ ಕನ್ನಡ ಸಾಧಕರನ್ನು ತೋರಿಸಿಕೊಟ್ಟವರು ಎಂದು ಪಾಂಪೈ ಕಾಲೇಜಿನ ನಿವೃತ್ತ ಉಪನ್ಯಾಸಕ ಜೆ. ಬಿ. ಮಿರಾಂದ ಹೇಳಿದರು.
ಎಳತ್ತೂರು ಗೋಪಾಲಕೃಷ್ಣ ದತ್ತಿ ಉಪನ್ಯಾಸದಡಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಕೃತಿ ವಿಮರ್ಶೆ ಮಾಡಿದ ಮಿರಾಂದ ಅವರು, ಉಡುಪರು ಪುಸ್ತಕ, ಪತ್ರಿಕೆ ಪ್ರಕಟನೆಯ ಜೊತೆಗೆ ನೂರಾರು ಬರಹಗಾರರನ್ನು ರೂಪಿಸಿದ, ಸ್ವತಃ ಸಾಹಿತಿಯಾಗಿ ಕಾವ್ಯ ನಾಟಕ, ಕಾದಂಬರಿ, ಲಲಿತ ಪ್ರಬಂಧ ಹೀಗೆ ವಿವಿಧ ವಿಭಾಗಗಳಲ್ಲಿ ಬರೆದಿದ್ದಾರೆ. ನನ್ನಂತಹವನು ಸಂಸ್ಕೃತ ಶ್ಲೋಕಗಳನ್ನು ಕಲಿಯಲು ಅವರು ಪ್ರೇರಣೆಯಾಗಿದ್ದರು. ಸತ್ಯಕಾಮ, ಪಾವೆಂರಂತಹವರ ಸಹಪಾಠಿಯಾಗಿದ್ದುಕೊಂಡು, ಉಡುಪಿಯಲ್ಲಿ ಕಲಾಕೇಂದ್ರ ರೂಪಿಸಿ, ಯುಗಪುರುಷ ಪತ್ರಿಕೆಯ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿ ಕಿನ್ನಿಗೋಳಿಯಂತಹ ಊರಿಗೆ ಕೀರ್ತಿ ತಂದ ಮಹಾಸಾಧಕ ಎಂದು ಹೇಳಿದರು.
ಸಾನ್ವಿ ಡಿ.ರಾವ್ ಕನ್ನಡದ ಹಾಡುಗಳನ್ನು ಹಾಡಿದರು. ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ವೀಣಾ ಶಶಿಧರ್, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್ ಮತ್ತಿತರರಿದ್ದರು.