ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಬಜಪೆ : ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಶನಿವಾರದಂದು ಬ್ಯಾಂಕಿನ ವಜ್ರ ಸಭಾಂಗಣದಲ್ಲಿ ನಡೆಯಿತು.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡೆನಿಸ್ ಡಿ'ಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಳು ಹಾಗೂ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವು ಸಮಾಜದ ಅಭಿವೃದ್ದಿಗೆ ಮಹತ್ವದ ಕೊಡುಗೆಯಾಗಿದೆ ಎಂದರು.ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಜಪೆ ಸೈಂಟ್ ಜೋಸೆಫ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಲ್ವಿನ್ ಅರುಣ್ ನೊರೂನ್ಹ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ, ನಿರಂತರ ಪರಿಶ್ರಮ, ಶಿಸ್ತು ಮತ್ತು ಗುರಿಯೊಂದಿಗೆ ಮುನ್ನಡೆಯುವಂತೆ ಕರೆ ನೀಡಿದರು.
ಈ ಸಂದರ್ಭ ಬ್ಯಾಂಕಿನ ಕಾರ್ಯವ್ಯಾಪ್ತಿಯ ಸುಮಾರು 20 ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಒಟ್ಟು 45 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಭಾಸ್ಕರ್ ಮಲ್ಲಿ, ನಿರ್ದೇಶಕರಾದ ಮೋನಪ್ಪ ಶೆಟ್ಟಿ ಎಕ್ಕಾರು, ರತ್ನಾಕರ್ ಶೆಟ್ಟಿ, ರಿತೇಶ್ ಶೆಟ್ಟಿ, ಸ್ಟೇನಿ ಡಿ'ಸೋಜಾ, ವಸಂತ, ಮೊಹಮ್ಮದ್ ಷರೀಫ್, ಶ್ರೀಮತಿ ಗೀತಾ ಕೆ. ಅಮೀನ್, ಶ್ರೀಮತಿ ಸವಿತ, ಶ್ರೀಮತಿ ಮೀರಾ, ಮೋಹನ್ ಹಾಗೂ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಪ್ರೆಸಿಲ್ಲಾ ಪಿರೇರ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.