ಬಜ್ಪೆ ಕಿನ್ನಿಪದವಿನಲ್ಲಿ ಆಪಾಯದಂಚಿನಲ್ಲಿ ಮನೆಗಳು ,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ತುರ್ತು ಕ್ರಮಕ್ಕೆ ಆಗ್ರಹ
ಬಜಪೆ:ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಪದವು ಎಸ್‌ಸಿ/ಎಸ್‌ಟಿ ಕಾಲೋನಿಯಲ್ಲಿರುವ ಸುಮಾರು ಮೂರು-ನಾಲ್ಕು ಮನೆಗಳು ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾಗಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕುಟುಂಬಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಹಾನಿಗೊಳಗಾದ ಮನೆಗಳ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದೆ.
ಈ ಕುರಿತು ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಂತ್ರಸ್ತ ಕುಟುಂಬಗಳಿಗೆ ತುರ್ತು ನೆರವು ಒದಗಿಸಿ, ಮನೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ವೇದಿಕೆಯ ಗೌರವಾಧ್ಯಕ್ಷ ಮತ್ತು ದಲಿತ ಸಂಘದ ನಾಯಕ ವಸಂತ್, ಕಾರ್ಯದರ್ಶಿ ನಿಸಾರ್ ಕರಾವಳಿ, ಗೌರವಾನ್ವಿತ ಸದಸ್ಯ ಖಾದರ್ ಜರಿ,ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಜೀರ್ ಕಿನ್ನಿಪದವು, ವೇದಿಕೆಯ ಐಟಿ ಸೆಲ್ ವಿಭಾಗದ ಹಫೀಜ್ ಕೊಲಂಬೆ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.