ತೋಕೂರಿನಲ್ಲಿ ಶೈಕ್ಷಣಿಕ ಸವಲತ್ತುಗಳ ವಿತರಣೆ
ತೋಕೂರು:ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ಹಾಗೂ ಮಹಿಳಾ ಮಂಡಲದ ಆಶ್ರಯದಲ್ಲಿ ಗ್ರಾಮದ ಅಂಗನವಾಡಿ, ಶಾಲೆ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳ ವಿತರಣಾ ಸಮಾರಂಭವು ನಡೆಯಿತು. ಎಂಆರ್‌ಪಿಎಲ್ ನ ಮ್ಯಾನೇಜರ್ ರಿತೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ದೇಶದ ಸುಸಂಸ್ಕೃತ ನಾಗರಿಕರಾಗಿ ಬೆಳೆಯಬೇಕು. ಕಲಿತ ಶಾಲೆ, ಸಹಕರಿಸಿದ ಸಂಸ್ಥೆಗಳ ಬೆನ್ನೆಲುಬಾಗಿ ನಿಲ್ಲುವಂತಾಗಬೇಕು ಎಂದರು.
ಬಿಜೆಪಿ ಮುಲ್ಕಿ ಮೂಡಬಿದ್ರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು ಮಹತ್ವದ ಜವಾಬ್ದಾರಿ ವಹಿಸುತ್ತಿದ್ದು, ತೋಕೂರುವಿನ ವಿದ್ಯಾರ್ಥಿಗಳು, ಜನತೆ ಅದೃಷ್ಟವಂತರು ಎಂದರು.
ಮುಲ್ಕಿ ಮಾನಂಪಾಡಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ವಸಂತಿ ಕುಮಾರಿ ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದರು.
ಯುವಕ ಸಂಘದ ಅಧ್ಯಕ್ಷ ವಾಮನ ಎಸ್ ದೇವಾಡಿಗ ಸ್ವಾಗತಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಮೇಘನ ಅಡಿಗ ಧನ್ಯವಾದವಿತ್ತರು. ಯುವಕ ಸಂಘದ ಜೊತೆ ಕಾರ್ಯದರ್ಶಿ ಭೂಷಣ್ ಹಾಗೂ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಮೋಹಿನಿ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ಯುವಕ ಸಂಘದ ಉಪಾಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು.