ಹಿರಿಯ ಸಾಹಿತಿ ಪತ್ರಕರ್ತ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ
ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಅಂಗವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಪರಮಾನಂದ ಸಾಲ್ಯಾನ್‌ರವರಿಗೆ ಸಸಿಹಿತ್ಲುವಿನ ಅವರ ಸ್ವಗೃಹದಲ್ಲಿ ನಡೆದ ಸರಳ ಮತ್ತು ಆಪ್ತ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ.ನಾ.ದಾಮೋದರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆರಿಸಿದ್ದಕ್ಕೆ ಸಂತೋಷವಾಗಿದೆ ಎಂದರು.
ಹಿರಿಯ ಜನಪದ ತಜ್ಞ ಕೆ.ಕೆ.ಪೇಜಾವರ ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು.
ಸಿನೆಮಾ- ರಂಗಭೂಮಿ ನಟ ನವೀನ್ ಡಿ ಪಡೀಲ್ ಮಾತನಾಡಿ ಪರಮಾನಂದ ಸಾಲ್ಯಾನ್‌ರವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು.
ಸಂಘಟಕ, ನಟ ಯತೀಶ್ ಬೈಕಂಪಾಡಿ ಮಾತನಾಡಿ ಪರಮಾನಂದರು ಲವಲವಿಕೆಯಿಂದ ಇದ್ದಾರೆ. ಆದರೆ ಇನ್ನಷ್ಟು ಆತ್ಮಸ್ತೈರ್ಯದಿಂದ ಇದ್ದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ರಂಗ ಭಾಸ್ಕರ ಪ್ರಶಸ್ತಿ- ವರ್ಷಂಪ್ರತಿ ಹಿರಿಯ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡುವ ಪ್ರಶಸ್ತಿಯಾಗಿದೆ. ಬಹುಮುಖ ಪ್ರತಿಭೆ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈಯವರು ಪ್ರಾಯೋಜಿಸುತ್ತಿದ್ದಾರೆ.
ಪ್ರಶಸ್ತಿಯು ಸನ್ಮಾನ ಪತ್ರ, ಶಾಲು, ಹಾರ, ಸ್ಮರಣಿಕೆ ಮತ್ತು ಪ್ರಶಸ್ತಿ ಮೊತ್ತ 15,000 ಹಾಗೂ ರಂಗಸಂಗಾತಿ ಗೆಳೆಯರ ಬಳಗ ಕೊಡಮಾಡಿದ 20,000/- ಒಟ್ಟು 35,000/- ಮೊತ್ತವನ್ನು ಒಳಗೊಂಡಿತ್ತು.
ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರುಗಳಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಉಡುಪಿಯ ರವಿರಾಜ್ ಹೆಚ್.ಪಿ., ರಾಜೇಶ್ ಭಟ್ ಪಣಿಯಾಡಿ, ಮೈಮ್ ರಾಮದಾಸ್, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ರಂಜನ್ ಬೋಳೂರು, ಪ್ರಮೀಳಾ ದೀಪಕ್, ಯಶೋಧರ ಕೋಟ್ಯಾನ್, ಉಪನ್ಯಾಸಕ ಕರುಣಾಕರ ಬಳ್ಕೂರು, ರಂಗಸಂಗಾತಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಬಜಾಲ್, ಚಂದ್ರಶೇಖರ ಕೂಳೂರು ಮುಂತಾದವರು ಮತ್ತು ಪರಮಾನಂದರ ಶಿಷ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.