ಮುಲ್ಕಿ:ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮುಲ್ಕಿ ವಲಯ ಸಂಚಾಲಕರಾಗಿ ಮಹೇಶ್ ಕುಮಾರ್ ನೇಮಕ
ಮುಲ್ಕಿ, 1928ರ ಸೆಪ್ಟೆಂಬರ್ 23ರಂದು ಉಡುಪಿಯಲ್ಲಿ ಸ್ಥಾಪನೆಯಾಗಿ, 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ತುಳು ಭಾಷೆ, ಸಂಸ್ಕೃತಿ, ಇತಿಹಾಸ, ಪರಂಪರೆ ಹಾಗೂ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷಿ ಧ್ಯೇಯದೊಂದಿಗೆ ತನ್ನ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ತುಳುವ ಮಹಾಸಭೆ ಅಂತರರಾಷ್ಟ್ರೀಯ ಸಂಘಟನೆಯ ಮುಲ್ಕಿ ತಾಲೂಕು ಸಂಚಾಲಕರಾಗಿ ಖ್ಯಾತ ತುಳು ಸಂಶೋಧಕ, ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಮಹಿ ಮುಲ್ಕಿ (ಮಹೇಶ್ ಕುಮಾರ್) ಅವರನ್ನು ನೇಮಕ ಮಾಡಲಾಗಿದೆ.
1994ರ ಜನವರಿ 29ರಂದು ಜನಿಸಿದ ಮಹಿ ಮುಲ್ಕಿ ಅವರು ಬಿ.ಇ. (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್) ಪದವೀಧರರಾಗಿದ್ದು, ಪ್ರಸ್ತುತ ಕಂಪನಿಯೊಂದರಲ್ಲಿ ಸೀನಿಯರ್ ಟೆಕ್ನಿಕಲ್ ಪ್ರಬಂಧಕರಾಗಿಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿಯೊಂದಿಗೆ ಸಮಾಜಸೇವೆ ಮತ್ತು ತುಳು ಸಂಸ್ಕೃತಿಯ ಅಧ್ಯಯನದಲ್ಲಿಯೂ ತೊಡಗಿಸಿಕೊಂಡಿರುವ ಅವರು ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.), ತುಳುಸಮಾಚಾರ ವೆಬ್ ನ್ಯೂಸ್ ಹಾಗೂ ನವ್ಯಾನ್ ಎಜುಕೇಷನ್ ಅಕಾಡೆಮಿ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿರುವ ಅವರು "ಮುಗಿಯಂದಿ ತಾದಿ", "ಬುಡುಗಡೆ", "ಕೋಟಿ ಚೆನ್ನಯೆರ್", "ಭೂತಾಳಪಾಂಡ್ಯನ ಕಟ್ಟುಕಟ್ಲೆಲು" ಹಾಗೂ "ಜೀಟಿಗೆ" ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ತುಳು ಸಂಶೋಧನೆ, ಮುಲ್ಕಿ ಸೀಮೆಯ ಐತಿಹಾಸಿಕ ಅಧ್ಯಯನ ಹಾಗೂ ತುಳುವರ ಆರಾಧನಾ ಪರಂಪರೆಯ ಕುರಿತು ಅಧ್ಯಯನ ನಡೆಸುವುದು ಇವರ ಪ್ರಮುಖ ಆಸಕ್ತಿ ಹಾಗೂ ಸಂಶೋಧನಾ ಕ್ಷೇತ್ರವಾಗಿದೆ.
ಇವರ ಅನುಭವ, ಸಂಶೋಧನಾ ಮನೋಭಾವ, ಸಂಘಟನಾ ಸಾಮರ್ಥ್ಯ ಮತ್ತು ತುಳು ನಾಡು-ನುಡಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ನೇಮಕಗೊಳಿಸಿದೆ ಈ ಸಂದರ್ಭ ಅಂತರಾಷ್ಟ್ರೀಯದ ಕೇಂದ್ರೀಯ ಸಮಿತಿಯ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು ಉಪಸ್ಥಿತರಿದ್ದರು
2028ರಲ್ಲಿ ನಡೆಯಲಿರುವ ತುಳುವ ಮಹಾಸಭೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು, ತುಳು ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ದೊರಕಿಸುವ ಹೋರಾಟವನ್ನು ಬಲಪಡಿಸುವುದು, ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವುದು ಹಾಗೂ ಯುವಜನರಲ್ಲಿ ತುಳು ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಮುಲ್ಕಿ ವಲಯದ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ರವರು ಶುಭ ಹಾರೈಸಿದ್ದಾರೆ.