ಕಿನ್ನಿಗೋಳಿ: ಎಸ್‌ಐಆರ್ ಕುರಿತು ಗೊಂದಲ ಬೇಡ, ಜಾಗೃತಿ ಇರಲಿ: ವಕೀಲ ಇರ್ಷಾದ್
ಕಿನ್ನಿಗೋಳಿ: ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಾದ ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಬಗ್ಗೆ ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ. ಆದರೆ, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಬಂದಾಗ ಅವರಿಗೆ ಸೂಕ್ತವಾದ ದಾಖಲೆಗಳನ್ನು ಒದಗಿಸುವ ಮೂಲಕ ಅತ್ಯಂತ ಜಾಗರೂಕತೆಯಿಂದ ಗಣತಿ ನಮೂನೆಯನ್ನು ಭರ್ತಿ ಮಾಡಿರಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮೂಡುಬಿದಿರೆ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಇರ್ಷಾದ್ ತಿಳಿಸಿದರು.
ಕಿನ್ನಿಗೋಳಿಯ ಶಾಂತಿನಗರ ಕೆಜೆಎಂ ಸಮುದಾಯ ಭವನದಲ್ಲಿ ಖಿಲ್‌ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ವತಿಯಿಂದ ಆಯೋಜಿಸಲಾದ ʼಎಸ್‌ಐಆರ್ ಮಾಹಿತಿ ಶಿಬಿರʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮತದಾರ ತನ್ನ ಹಕ್ಕನ್ನು ಸಂರಕ್ಷಿಸಿಕೊಳ್ಳುವುದು ಆತನ ಜವಾಬ್ದಾರಿಯಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದೇ ಪಾಲ್ಗೊಳ್ಳಬೇಕು. ಯಾವುದೇ ತಪ್ಪು ಸಂದೇಶ, ಅನಗತ್ಯ ಗೊಂದಲಗಳಿಗೆ ಒಳಗಾಗದೇ ಅಧಿಕಾರಿಗಳು ಮನೆಗೆ ಬಂದಾಗ ಮಾಹಿತಿಯನ್ನು ಹಂಚಿಕೊಂಡು ಜವಾಬ್ದಾರಿಯನ್ನು ಮೆರೆಯಬೇಕಿದೆ ಎಂದರು.
ಇದೇ ವೇಳೆ ಎಸ್‌ಐಆರ್ ನಡೆಯುವ ಪ್ರಕ್ರಿಯೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಕೆಜೆಎಂ ಶಾಂತಿನಗರ ಖತೀಬ್ ಉಮರುಲ್ ಫಾರೂಕ್ ಸಖಾಫಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕೆಜೆಎಂ ಶಾಂತಿನಗರ ಅಧ್ಯಕ್ಷ ಟಿ.ಎ. ಹನೀಫ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮೂಡುಬಿದಿರೆ ತಾಲೂಕು ಸಮಿತಿ ಸದಸ್ಯರಾದ ಜಾವೇದ್ ಮಾರೂರು, ಇಬ್ರಾಹಿಂ ಹಂಡೇಲು ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಟಿ.ಹೆಚ್. ಮಯ್ಯದ್ದಿ ಉಪಸ್ಥಿತರಿದ್ದರು. ಇಕ್ಬಾಲ್ ಚೋಟರಿಕೆ ನಿರೂಪಿಸಿ, ಟಿ.ಕೆ. ಅಬ್ದುಲ್ ಖಾದರ್ ವಂದಿಸಿದರು.