ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿ "ಪಿಎಂ ಸ್ವನಿಧಿ ಲೋಕ ಕಲ್ಯಾಣ" ಮೇಳ
ಕಿನ್ನಿಗೋಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿ. ಎಮ್. ಸ್ವನಿಧಿ (ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ) ಯೋಜನೆಯ 6 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ "ಪಿ.ಎಮ್ ಸ್ವನಿಧಿ ಲೋಕ ಕಲ್ಯಾಣ" ಮೇಳವು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿ. ಎಮ್. ಸ್ವನಿಧಿ ಯೋಜನೆಯು ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದ್ದು, ವ್ಯಾಪಾರಿಗಳಿಗೆ ಯಾವುದೇ ಜಾಮೀನಿಲ್ಲದೆ ಸಾಲ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಹಾಗೂ ಉತ್ತಮ ಮರುಪಾವತಿಗೆ ಪ್ರೋತ್ಸಾಹಧನ ಒದಗಿಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ನೆರವಾಗುತ್ತಿದೆ. ಯೋಜನೆಯನ್ನು 2030ರವರೆಗೆ ವಿಸ್ತರಿಸಿರುವುದರಿಂದ ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ನಗರ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ್ ಮೂಡುಬಗೆ ಪಿ. ಎಮ್. ಸ್ವನಿಧಿ ಯೋಜನೆಯ ಉದ್ದೇಶ, ಅನುಷ್ಠಾನ, 2030ರವರೆಗೆ ಯೋಜನೆ ವಿಸ್ತರಣೆ, ಸಾಲ ಸೌಲಭ್ಯ, ಡಿಜಿಟಲ್ ವಹಿವಾಟಿನ ಪ್ರೋತ್ಸಾಹ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿ ನೀಡಿ, ಅರ್ಹ ಬೀದಿ ಬದಿ ವ್ಯಾಪಾರಸ್ಥರು ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ನಗರ ಅಭಿಯಾನ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ' ಸ್ವನಿಧಿ ಸಮೃದ್ಧಿ' ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಸ್ಥರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗಳನ್ನು ನಡೆಸಿ, ಸಮೀಕ್ಷೆಯಲ್ಲಿ ಗುರುತಿಸಲಾದ ಕುಟುಂಬದ ಸದಸ್ಯರಿಗೆ 8 ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಕಲ್ಪಿಸುವ ಕುರಿತು ಹಾಗೂ ಡಿಜೆ ಎವೈ -ಎಸ್ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ರಚನೆ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ದೊರೆಯುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತಾ ರಾವ್ ,ಸದಸ್ಯರಾದ ಲೋಕಯ್ಯ ಸಾಲ್ಯಾನ್, ಶೈಲೇಶ್, ಅಂಚನ್,ಪ್ರಣೀಕ್, ಪಟ್ಟಣ ಪಂಚಾಯತ್ ಸಿಬ್ಬಂದಿಯವರಾದ ಪುಷ್ಪಾ ಮತ್ತು ಕಮಲ ಉಪಸ್ಥಿತರಿದ್ದರು.
ಪುಷ್ಪಾ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.