Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ತರಬೇತಿ ತರಗತಿ ಉದ್ಘಾಟನೆ

ಕಿನ್ನಿಗೋಳಿ: ಯಕ್ಷಗಾನವು ಹಿಂದೆ ಗಂಡು ಕಲೆಯಾಗಿ ಪರಿಗಣಿಸಲ್ಪಡುತ್ತಿತ್ತು. ಆದರೆ ಇಂದು ಶಿಕ್ಷಣದ ಜೊತೆಗೆ ಈ ಕಲೆಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಕ್ಷಗಾನದ ಕಂಪನ್ನು ಹರಡುವ ಮುಖೇನ ಸಮಾಜದಾದ್ಯಂತ  ಯಕ್ಷಗಾನದ ಅಭಿರುಚಿಯನ್ನು ಹೆಚ್ಚಿಸಬೇಕು ಎಂದು 
ಯಕ್ಷ ಧ್ರುವಪಟ್ಲ ಫೌಂಡೇಶನ್ ನ  ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಹೇಳಿದರು.ಅವರು ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿಯನ್ನು  ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ತರಬೇತುದಾರೆ  ಅನ್ವಿತ ಕೆರೆಕಾಡು ಮಾತನಾಡಿ, “ ನಮ್ಮ ಜಿಲ್ಲೆಯ ಹೆಮ್ಮೆಯ ಕಲೆಯಾದ ಯಕ್ಷಗಾನವು ಇಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಕಲೆಯ ಮೂಲಕ ವಿದ್ಯಾರ್ಥಿಗಳು ಶಿಸ್ತು, ಆತ್ಮವಿಶ್ವಾಸ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದರು. ರೋಟರಿಯ ಹಿರಿಯ ಸದಸ್ಯರಾದ  ಟಿ.ಎಚ್. ಮಯ್ಯದಿ, ಶರತ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯ ಸತೀಶ್ ಚಂದ್ರ ಹೆಗ್ಡೆ,  ಹರೀಶ್ ಶೆಟ್ಟಿ , ಶಾಲೆಯ ಆಡಳಿತಾಧಿಕಾರಿ ಶ್ರೀ ಭರತ್ ಕುಮಾರ್  ಉಪಸ್ಥಿತರಿದ್ದರು.
 ಮುಖ್ಯ ಶಿಕ್ಷಕಿ ಸುನೀತಾ ಗುರುರಾಜ್  ಸ್ವಾಗತಿಸಿದರು. ಗಂಗಾದೇವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ರೇಷ್ಮ ವಂದಿಸಿದರು.