ಕಾರಿನ ಮೇಲೆ ಬಿದ್ದ ಮರ,ಕೂದಳೆಲೆಯ ಅಂತರದಲ್ಲಿ ಚಾಲಕ ಪಾರು
ಕೈಕಂಬ: ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ ಬಿದ್ದು ಕಾರು ಜಖಂಗೊಂಡ ಘಟನೆ ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169 ರ ಗುರುಪುರ-ಕೈಕಂಬ ಬಳಿಯ ರೋಸಾ ಮಿಸ್ತಿಕಾ ಶಾಲೆಯ ಬಳಿ ಶನಿವಾರ ರಾತ್ರಿ ನಡೆದಿದೆ.ಘಟನೆಯಲ್ಲಿ ಚಾಲಕ ಅದೃಷ್ಟವಶಾತ್ ಕೂದಲೆಲೆ ಅಂತರದಲ್ಲಿ ಪಾರಾಗಿದ್ದಾರೆ.
ಮಂಜಿತ್ ರೈ ಎಂಬವರು ತನ್ನ ಆಲ್ಟೊ ಕಾರಿನಲ್ಲಿ ಗುರುಪುರ-ಕೈಕಂಬದಿಂದ ಪೊಳಲಿಯತ್ತ ಸಾಗುತ್ತಿದ್ದ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ರೋಸಾ ಮಿಸ್ತಿಕಾ ಶಾಲೆಯ ಬಳಿ ಸಾಗುತ್ತಿದ್ದಂತೆ ಹೆದ್ದಾರಿ ಬದಿಯ ಬೃಹತ್ ಮರ ಉರುಳಿ ಕಾರಿನ ಮೇಲೆ ಬಿದ್ದಿದೆ.ಮರ ಕಾರಿನ ಬಾನೆಟ್ ಮೇಲೆ ಬಿದ್ದು ಕಾರು ಜಖಂಗೊಂಡಿದೆ. ಮರ ಬಾನೆಟ್ ಮೇಲೆ ಬೀಳದೆ ನೇರವಾಗಿ ಕಾರಿನ ಟಾಪ್ ಮೇಲೆ ಬೀಳುತ್ತಿದ್ದರೆ ಅನಾಹುತ ನಡೆಯುತ್ತಿತ್ತು. ಸ್ವಲ್ಪದರಲ್ಲೇ ಮಂಜಿತ್ ರೈ ಬಚಾವಾಗಿದ್ದಾರೆ.
ಗಂಜಿಮಠ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಪ್ರವೀಣ್ ಶೆಟ್ಟಿ ಮಳಲಿ ಮತ್ತು ಸ್ಥಳದಲ್ಲಿದ್ದವರು ತಕ್ಷಣ ಮಂಜಿತ್ ರೈ ಸಹಾಯಕ್ಕೆ ಧಾವಿಸಿ, ಮರ ತೆರವು ಮಾಡಿ ಕಾರನ್ನು ಹೆದ್ದಾರಿಯಿಂದ ತೆರವುಗೊಳಿಸಲು ಅಗ್ನಿ ಶಾಮಕ ದಳಕ್ಕೆ ಸಹಕರಿಸಿದರು.
ಈ ವೇಳೆ ಸುಮಾರು 45 ನಿಮಿಷ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಜಪೆ ಪೊಲೀಸರು ಮತ್ತು ಸ್ಥಳೀಯರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.